ಕಾರವಾರದ ಮುಖ್ಯ ಕಡಲತೀರದ ಮೇಲೆ ಮತ್ತೆ ಕೋಸ್ಟಗಾರ್ಡ ಅಧಿಕಾರಿಗಳು ಕಣ್ಣು ಹಾಕಿದ್ದಾರೆ. ಮಂಗಳವಾರ ಸಾಗರ ದರ್ಶನ ಭವನದ ಬಳಿ ತಟರಕ್ಷಕ ಪಡೆಯುವರು ಬೇಲಿ ನಿರ್ಮಿಸಲು ಮುಂದಾಗಿದ್ದು, ಜನಶಕ್ತಿ ವೇದಿಕೆಯವರು ಇದಕ್ಕೆ ತಡೆ ಒಡ್ಡಿದ್ದಾರೆ.
2009-10ರಲ್ಲಿ ಕೋಸ್ಟಗಾರ್ಡಿನವರು ಕಾರವಾರ ಕಡಲತೀರವನ್ನು ವಶಕ್ಕೆಪಡೆಯಲು ಪ್ರಯತ್ನಿಸಿದ್ದರು. ಭೂಮಿಯ ದಾಖಲೆಗಳಲ್ಲಿ ಸಹ ತಟರಕ್ಷಕದಳದ ಹೆಸರು ನಮೂದಾಗಿತ್ತು. ಆ ವೇಳೆಯಲ್ಲಿ ಕಾರವಾರ ಕಡಲತೀರಕ್ಕೆ `ನಿಷೇಧಿತ ವಲಯ’ ಎಂಬ ನಾಮಫಲಕ ಬಿದ್ದಿತ್ತು. ಸಾವಿರಾರು ಸಂಖ್ಯೆಯ ಸಾರ್ವಜನಿಕರು ಇದಕ್ಕೆ ವಿರೋಧವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅದರ ಪರಿಣಾಮ ಕಾರವಾರ ಕಡಲತೀರದ ಭೂಮಿ ಕರ್ನಾಟಕ ಸರ್ಕಾರಕ್ಕೆ ಮರಳಿತ್ತು. ಅದಾದ ನಂತರವೂ ಕೆಲ ಬಾರಿ ಕಡಲತೀರವನ್ನು ತಮ್ಮದಾಗಿಸಿಕೊಳ್ಳಲು ಕೋಸ್ಟಗಾರ್ಡನವರು ಪ್ರಯತ್ನ ನಡೆಸಿದ್ದು, ಅದು ಪರಿಣಾಮ ಬೀರಿರಲಿಲ್ಲ.
ಇದೀಗ ಕಾರವಾರ ಕಡಲತೀರದ ಮೂರುವರೆ ಎಕರೆಯಷ್ಟು ಭೂಮಿ ಕೋಸ್ಟಗಾರ್ಡ ವಶಕ್ಕೆ ಹೋಗಿದೆ. 2025ರ ಮೇ ಅವಧಿಯಲ್ಲಿ ಈ ವಿಷಯ ಜನಶಕ್ತಿ ವೇದಿಕೆಯವರಿಗೆ ಗೊತ್ತಾಗಿದ್ದು, ಅದೇ ದಿನ ಜಿಲ್ಲಾಧಿಕಾರಿ ಕಚೇರಿಗೆ ಮಾಧವ ನಾಯಕ ಅವರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವೂ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆ ವಿವರಿಸಿದ್ದು, ಅದಾಗಿಯೂ ಮಂಗಳವಾರ ತಡರಕ್ಷಕ ಸಿಬ್ಬಂದಿ ಕಾರವಾರ ಕಡಲತೀರದ ಮೇಲೆ ಕಣ್ಣು ಹಾಕಿದ್ದರು.
ಕಡಲತೀರದಲ್ಲಿ ಬೆಳೆದ ಗಿಡ-ಗಂಟಿಗಳನ್ನು ಕೋಸ್ಟಗಾರ್ಡಿನವರು ಸ್ವಚ್ಚಮಾಡಿದ್ದು, ಅಲ್ಲಿ ವಿವಿಧ ಚಟುವಟಿಕೆ ನಡೆಸಲು ಸಜ್ಜಾಗಿದ್ದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಬಾಬು ಶೇಖ್ ಸ್ಥಳಕ್ಕೆ ತೆರಳಿ ಅದನ್ನು ತಡೆದರು. ಅಲ್ಲಿಂದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೂ ಫೋನ್ ಮಾಡಿದರು. ತಹಶೀಲ್ದಾರ್ ನಿಶ್ಚಿಲ್ ನರೋನಾ ಅವರು ಸ್ಥಳಕ್ಕೆ ಆಗಮಿಸಿದರು. ಡಿವೈಎಸ್ಪಿ ಗಿರೀಶ್ ಅವರು ಅಲ್ಲಿಗೆ ಬಂದು ಸಮಸ್ಯೆ ಆಲಿಸಿದರು.
`ಭಾರತೀಯ ನೌಕಾನೆಲೆಗಾಗಿ ಈಗಾಗಲೇ 11 ಎಕರೆ ಕಡಲತೀರ ಬಿಟ್ಟಾಗಿದೆ. ಅದರಲ್ಲಿ 4 ಎಕರೆ ಸಹ ಸರಿಯಾಗಿ ಬಳಕೆ ಆಗಿಲ್ಲ. ಸದ್ಯ ಕಾರವಾರ ನಗರಕ್ಕೆ ಇರುವುದು ಒಂದೇ ಕಡಲತೀರವಾಗಿದ್ದು, ಅದನ್ನು ಉಳಿಸಿಕೊಳ್ಳಬೇಕಿದೆ. ಮೀನುಗಾರರು, ಪ್ರವಾಸಿಗರು ಸೇರಿ ಸಾರ್ವಜನಿಕರಿಗೆ ಕಡಲತೀರ ಅನಿವಾರ್ಯ’ ಎಂದು ಅಲ್ಲಿದ್ದವರು ಹೇಳಿದರು. ದಿವೇಕರ್ ಕಾಲೇಜು ಅಕ್ಕಪಕ್ಕ ಕಡಲತೀರಕ್ಕೆ ಬೇಲಿ ಹಾಕುವುದನ್ನು ವಿರೋಧಿಸಿದರು.
ಈ ವೇಳೆ ಹಾಜರಿದ್ದ ಅಧಿಕಾರಿಗಳು `ಕಡಲತೀರ ವಶಕ್ಕೆಪಡೆದರೆ ಗಲಾಟೆ ಆಗುವ ಸಾಧ್ಯತೆಯಿದೆ’ ಎಂದು ಕೋಸ್ಟಗಾರ್ಡ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ತಟರಕ್ಷಕಪಡೆಯ ಕಮಾಡೆಂಟ್ ಕಿರಣಕುಮಾರ್ ಸಿಂಹ ಹಾಗೂ ಇನ್ನಿತರರು ತಾವು ರೂಪಿಸಿದ್ದ ಕೆಲಸವನ್ನು ಅಲ್ಲಿಗೆ ಬಿಟ್ಟು ಮರಳಿದರು. `ಕೋಸ್ಟಗಾರ್ಡ ಸಿಬ್ಬಂದಿ ಮತ್ತೆ ಕಡಲತೀರ ವಶಕ್ಕೆ ಬರುವ ಸಾಧ್ಯತೆಯಿದ್ದು, ಅದಕ್ಕೆ ಕಾರವಾರದ ಜನ ಆಸ್ಪದ ಕೊಡಬಾರದು. ಹೋರಾಟ ಮಾಡಿಯಾದರೂ ಕಡಲತೀರವನ್ನು ಉಳಿಸಿಕೊಳ್ಳಬೇಕು’ ಎಂದು ಜನಶಕ್ತಿ ವೇದಿಕೆಯವರು ಜನರಲ್ಲಿ ಮನವಿ ಮಾಡಿದರು.
Discussion about this post