ಭಟ್ಕಳದ ಕಾಡಿನೊಳಗೆ ರಾಶಿ ರಾಶಿ ಪ್ರಮಾಣದಲ್ಲಿ ಬಿದ್ದಿದ್ದ ಮೂಳೆಗಳ ಪ್ರಕರಣ ದಿನಕ್ಕೊಂದು ತಿರುವುಪಡೆಯುತ್ತಿದೆ. ಮುಗ್ದಂ ಕಾಲೋನಿ ಅಂಚಿನಲ್ಲಿ ಕಾಣಿಸಿದ ಮೂಳೆಗಳ ವಿಷಯವಾಗಿ ಪೊಲೀಸರ ತನಿಖೆಯೂ ಜೋರಾಗಿದೆ.
ಭಟ್ಕಳದ ಕಾಡಿನೊಳಗೆ ರಾಶಿ ರಾಶಿ ಮೂಳೆ ಸಿಕ್ಕಿದ್ದು, ಭಾರೀ ಪ್ರಮಾಣದಲ್ಲಿ ಜಾನುವಾರುಗಳ ಹತ್ಯೆ ನಡೆದಿರುವ ಅನುಮಾನವ್ಯಕ್ತವಾಗಿತ್ತು. ಒಂದೇ ಕಡೆ ನೂರಾರು ದನಗಳ ಮೂಳೆ ಬಿದ್ದಿರುವುದನ್ನು ನೋಡಿ ಸ್ಥಳೀಯರು ಕಂಗಾಲಾಗಿದ್ದರು. ಅರಣ್ಯ ಪ್ರದೇಶದಲ್ಲಿ ಮೂಳೆ ಕಾಣಿಸಿದ ಕಾರಣ ಅರಣ್ಯಾಧಿಕಾರಿಗಳು ಈ ಬಗ್ಗೆ ಪೊಲೀಸ್ ದೂರು ನೀಡಿದ್ದರು.
ದನಗಳ ಹತ್ಯೆ ನಂತರ ಮುಗ್ದಂ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ಮೂಳೆಗಳನ್ನು ಎಸೆದ ಬಗ್ಗೆ ಅಂದಾಜಿಸಿದ್ದರು. ವಿವಿಧ ವಿಡಿಯೋಗಳು ಸಹ ಓಡಾಡಿದ್ದವು. ಮೂಳೆ ಬಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಸಾಕಷ್ಟು ಅನುಮಾನ ಮೂಡಿದ್ದು, ಅರಣ್ಯ ಇಲಾಖೆಯವರು ದಾಖಲಿಸಿದ ದೂರಿನಲ್ಲಿ ಈ ಬಗ್ಗೆಯೂ ವಿವರಿಸಿದ್ದರು. ಗುಡ್ಡದ ಮೇಲೆ ಹುಡುಕಾಟ ನಡೆಸಿದವರಿಗೆ ಬೇರೆ ಭಾಗದಿಂದ ಚೀಲಗಳಲ್ಲಿ ಮೂಳೆ ಕಟ್ಟಿಕೊಂಡು ಬಂದು ಇಲ್ಲಿ ಎಸೆದಿರುವ ಕುರುಹು ಸಹ ಕಾಣಿಸಿತ್ತು. ಹಿಂದೂ ಸಂಘಟನೆ ಪ್ರಮುಖರು ಮೂಳೆಯ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ಅದೆಲ್ಲದರ ನಡುವೆ ಭಟ್ಕಳ ಪುರಸಭೆಯವರು ಮೂಳೆ ಪ್ರಕರಣವೇ ಸುಳ್ಳು ಎಂದಿದ್ದು, ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಸಹ ಪೊಲೀಸ್ ದೂರು ನೀಡಿದ್ದಾರೆ!
`ಸೆಪ್ಟೆಂಬರ್ 9ರಂದು ರಾತ್ರಿ 9 ಗಂಟೆ ಸುಮಾರಿಗೆ ಅಜ್ಞಾತ ಆರೋಪಿತರು ಸೋಶಿಯಲ್ ಮೀಡಿಯಾದಲ್ಲಿ ಭಟ್ಕಳದ ಮುಗ್ದುಂ ಕಾಲೋನಿಯ ತೆರೆದ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ಮೂಳೆಗಳ ರಾಶಿ ಬಿದ್ದಿವೆ ಎಂದು ವಿಡಿಯೋ ಹರಿಬಿಟ್ಟಿದ್ದಾರೆ. ಇದು ಶಾಂತಿ ಭಂಗದ ಪ್ರಯತ್ನ’ ಎಂದು ಪುರಸಭೆ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ. ಹಿಂದು ಸಂಘಟನೆ ಮುಖಂಡ ಶ್ರೀಕಾಂತ ನಾಯ್ಕ ಸಹ ಈ ಬಗ್ಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ. `ಪುರಸಭೆ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೂಳೆ ಸಿಕ್ಕಿದೆ. ಆದರೆ, ಪುರಸಭೆ ಅದನ್ನು ಅಲ್ಲಗಳೆಯುವ ಮೂಲಕ ದಾರಿ ತಪ್ಪಿಸುತ್ತಿದೆ’ ಎಂದವರು ಹೇಳಿದ್ದಾರೆ. ಸದ್ಯ ಮೂಳೆ ಸಿಕ್ಕಿದೆ ಎಂದು ಅರಣ್ಯ ಇಲಾಖೆಯವರು ಪೊಲೀಸ್ ದೂರು ದಾಖಲಿಸಿದ್ದು, ಮೂಳೆ ಸಿಕ್ಕಿಲ್ಲ ಎಂದು ಪುರಸಭೆ ಪ್ರಕರಣ ದಾಖಲಿಸಿದೆ. ಪೊಲೀಸರು ವಿವಿಧ ಸಾಕ್ಷಿಗಳನ್ನು ಸಂಗ್ರಹಿಸಿ ಸತ್ಯಾಸತ್ಯತೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಮೂಳೆ ವಿಷಯವಾಗಿ ಸರ್ಕಾರಿ ಇಲಾಖೆಗಳ ನಡುವೆಯೇ ಸಮನ್ವಯತೆ ಇಲ್ಲದಿರುವುದು ಸಾಭೀತಾಗಿದೆ. ಜೊತೆಗೆ ಈ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆಯುವ ಲಕ್ಷಣಗಳಿವೆ.
Discussion about this post