ಕುಮಟಾದ ನಾಗರತ್ನ ನಾಯ್ಕ ಅವರ ಮನೆಯೊಳಗೆ ಗಟಾರದ ನೀರು ನುಗ್ಗುತ್ತಿದೆ. ಮನೆಯೊಳಗೆ ಗಲೀಜು ನೀರು ನುಗ್ಗುವುದರಿಂದ ನಾಗರತ್ನ ನಾಯ್ಕ ಅವರ ಕುಟುಂಬದವರು ನಿತ್ಯವೂ ಸಮಸ್ಯೆ ಅನುಭವಿಸುತ್ತಿದ್ದಾರೆ.
ತಮ್ಮ ಸಮಸ್ಯೆ ಬಗೆಹರಿಸುವಂತೆ ಕೋರಿ ಅವರು ಅನೇಕ ಕಚೇರಿಗಳಿಗೆ ಅಲೆದಾಡಿದ್ದಾರೆ. ಆದರೆ, ಇದರಿಂದ ಯಾವ ಪ್ರಯೋಜನವೂ ಆಗಿಲ್ಲ. ಹೊಲನಗದ್ದೆ ಗ್ರಾಮ ಪಂಚಾಯತಗೆ ತೆರಳಿ ಅವರು ಗಟಾರದ ನೀರು ಮನೆಗೆ ನುಗ್ಗುವ ಬಗ್ಗೆ ವಿವರಿಸಿದ್ದಾರೆ. ಗ್ರಾಮ ಪಂಚಾಯತದವರು ಸ್ಪಂದಿಸದ ಕಾರಣ ತಹಶೀಲ್ದಾರ್ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ತಹಶೀಲ್ದಾರ್ ಕಚೇರಿಯಿಂದ ಕ್ರಮಕ್ಕಾಗಿ ತಾಲೂಕು ಪಂಚಾಯತಗೆ ಪತ್ರ ರವಾನೆಯಾಗಿದೆ. ಆದರೆ, ಇಲಾಖೆ-ಇಲಾಖೆಗಳ ನಡುವೆ ಪತ್ರ ವ್ಯವಹಾರ ನಡೆದಿದೆಯೇ ವಿನ: ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಊರಿನ ಎಲ್ಲಾ ಶೌಚಾಲಯದ ನೀರು ನಾಗರತ್ನ ಅವರ ಮನೆಯೊಳಗೆ ಬರುತ್ತಿದೆ. ಮಳೆಗಾಲದ ಅವಧಿಯಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಬರುವ ಆತಂಕವಿರುವ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ನೀಡಿದರೂ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ. ಗ್ರಾಪಂ ಅಧಿಕಾರಿಗಳು ಗಮನಹರಿಸಿಲ್ಲ ಎಂದವರು ಆರೋಪಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸದ ಗ್ರಾ ಪಂ ಅಧಿಕಾರಿ ನಾಗರಾಜ ನಾಯ್ಕ ಅವರ ವಿರುದ್ಧ ಜಿ ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.
`ಜಿಲ್ಲಾ ಪಂಚಾಯತದ ಮೇಲೆ ತಮಗೆ ನಂಬಿಕೆಯಿದ್ದು, ಅವರು ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಅದಕ್ಕೂ ಯಾರಾದರೂ ಅಡ್ಡಿಮಾಡಿದರೆ ಮಾನವ ಹಕ್ಕು ಆಯೋಗದ ಮೊರೆ ಹೋಗುವುದು ಅನಿವಾರ್ಯ’ ಎಂದವರು ವಿವರಿಸಿದ್ದಾರೆ.
Discussion about this post