ಅಂಕೋಲಾದ ನಾಗರಾಜ ನಾಯ್ಕ ಅವರ ಬೈಕ್ ಕದ್ದು ಪರಾರಿಯಾಗಿದ್ದ ಕಾರವಾರದ ಅಮೀತ ಭಂಡಾರಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಕದ್ದ ಬೈಕನ್ನು ವಶಕ್ಕೆಪಡೆದ ಅಂಕೋಲಾ ಪೊಲೀಸರು ಅಮೀತ ಭಂಡಾರಿ ಅವರಿಗೆ ಜೈಲಿನ ದಾರಿ ತೋರಿಸಿದ್ದಾರೆ.
ಅಂಕೋಲಾ ಶಿರಕುಳಿಯ ನಾಗರಾಜ ಸುರೇಶ ನಾಯ್ಕ ಅವರು ಸೆಪ್ಟೆಂಬರ್ 3ರಂದು ಪಿಎಸ್ ಪ್ರಭು ಪೆಟ್ರೋಲ್ ಬಂಕಿನ ಬಳಿ ಬೈಲ್ ನಿಲ್ಲಿಸಿದ್ದರು. ಪೆಟ್ರೋಲ್ ಬಂಕಿನ ಆವರಣ ಗೋಡೆ ಬಳಿಯಿದ್ದ ಬೈಕು ನೋಡಿದ್ದ ಕಾರವಾರ ಕೋಡಿಭಾಗ ಅಳವೆವಾಡದ ಅಮೀತ ಮುಕ್ತು ಭಂಡಾರಿ ಉಪಾಯವಾಗಿ ಆ ಬೈಕನ್ನು ಅಪಹರಿಸಿದ್ದರು. ಬೈಕ್ ಕಾಣೆಯಾದ ಬಗ್ಗೆ ತಲೆಕೆಡಿಸಿಕೊಂಡ ನಾಗರಾಜ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು.
ವಾರಗಳ ಕಾಲ ಹುಡುಕಿದರೂ ಕಳ್ಳತನವಾದ ಬೈಕ್ ಸಿಕ್ಕಿರಲಿಲ್ಲ. ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಪೊಲೀಸ್ ಉಪಾಧೀಕ್ಷಕ ಎಸ್ ವಿ ಗಿರೀಶ ಸೇರಿ ಚರ್ಚೆ ನಡೆಸಿದರು.
ಬೈಕ್ ಕಳ್ಳನನ್ನು ಹಿಡಿಯುವುದಕ್ಕಾಗಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ಅವರ ಜೊತೆ ಸಿಬ್ಬಂದಿ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಸತೀಶ ಅಂಬಿಗ, ಆಸೀಪ್ ಕಂಕೂರು ತಂಡ ಕಟ್ಟಿಕೊಂಡು ಕೆಲಸ ಮಾಡಿದರು. ವಿವಿಧ ಸಿಸಿ ಕ್ಯಾಮರಾ, ಕಳ್ಳನ ಚಲನ-ವಲನ ಹಾಗೂ ಅಪರಾಧ ಕೃತ್ಯ ಎಸಗುವವರ ಪಟ್ಟಿ ಹಿಡಿದು ಪೊಲೀಸರು ಸಂಚರಿಸಿದರು.
ಆಗ, ಕಾರವಾರದ ಕೋಡಿಭಾಗದ ಅಳವೆವಾಡದ ಅಮೀತ ಭಂಡಾರಿ ಸಿಕ್ಕಿ ಬಿದ್ದಿದ್ದು ವಿಚಾರಣೆ ನಡೆಸಿದಾಗ ಅಮಿತ ಭಂಡಾರಿ ಬೈಕ್ ಕದ್ದಿರುವುದು ದೃಢವಾಯಿತು. ಬೈಕನ್ನು ಜಪ್ತು ಮಾಡಿದ ಪೊಲೀಸರು ಅಮೀತ ಭಂಡಾರಿಯನ್ನು ಬಂಧಿಸಿದರು.
Discussion about this post