ಭಟ್ಕಳದ ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುವುದಾಗಿ ನಂಬಿಸಿದ ಮಂಗಳೂರಿನ ವಿಶಿಷ್ಟಾ ಅಕಾಡೆಮಿ 7.64 ಲಕ್ಷ ರೂ ವಂಚಿಸಿದೆ. ಮೋಸ ಹೋದ ವಿದ್ಯಾರ್ಥಿಗಳು ಕಾಲೇಜಿನ ಪ್ರಾಚಾರ್ಯ ಶ್ರೀನಾಥ ಫೈ ಅವರನ್ನು ಪ್ರಶ್ನಿಸುತ್ತಿದ್ದು, ಶ್ರೀನಾಥ ಪೈ ಅವರು ಬೇರೆ ದಾರಿ ಇಲ್ಲದೇ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಮಂಗಳೂರಿನ ವಿಶಿಷ್ಟಾ ಅಕಾಡೆಮಿಯ ಪ್ರದಾನ ಶೆಟ್ಟಿ ಅವರು ಭಟ್ಕಳಕ್ಕೆ ಬಂದಿದ್ದರು. ಅವರು ಅಲ್ಲಿನ ಗುರು ಸುಧೀಂದ್ರ ಕಾಲೇಜಿಗೆ ತೆರಳಿ ಪ್ರಾಚಾರ್ಯರನ್ನು ಭೇಟಿ ಮಾಡಿದ್ದರು. ವಿಶಿಷ್ಟಾ ಅಕಾಡೆಮಿಯ ವಿಶೇಷ ಯೋಜನೆಗಳ ಬಗ್ಗೆ ತಿಳಿಸಿದ್ದರು. ಈ ಕಾಲೇಜಿನಲ್ಲಿ ಓದುವ ಮಕ್ಕಳಿಗೆ ವಿಶೇಷ ತರಬೇತಿ ನೀಡುವುದಾಗಿ ಹೇಳಿಕೊಂಡಿದ್ದರು. ಜೊತೆಗೆ ಸ್ಕಾಲರ್ ಶಿಫ್ ಸಹ ಒದಗಿಸುವ ಭರವಸೆ ನೀಡಿದ್ದರು.
ಅದರ ಪ್ರಕಾರ ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳು ಸಿ ಎಂ ಎ ಯು ಎಸ್ ಕೋರ್ಸ ದಾಖಲಾತಿಗೆ ಆಸಕ್ತಿ ತೋರಿದ್ದರು. 24 ವಿದ್ಯಾರ್ಥಿಗಳು ಇದಕ್ಕಾಗಿ ಹೆಸರು ನೋಂದಾಯಿಸಿದ್ದರು. ಪ್ರತಿ ವಿದ್ಯಾರ್ಥಿಯೂ ತರಬೇತಿ ಶುಲ್ಕ ಎಂದು 31700ರೂ ಹಣವನ್ನು ಪಾವತಿಸಿದ್ದರು. ಆದರೆ, ವಿಶಿಷ್ಟಾ ಅಕಾಡೆಮಿಯವರು ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿಯನ್ನು ಕೊಡಲಿಲ್ಲ. ಸ್ಕಾಲರ್ಶಿಪ್ ಸಹ ವಿತರಿಸಲಿಲ್ಲ.
ಮೈಸೂರಿಗೆ ಪರಾರಿಯಾದ ಪ್ರದಾನ ಶೆಟ್ಟಿ ಅವರನ್ನು ಕಾಲೇಜಿನವರು ಮಾತನಾಡಿಸುವ ಪ್ರಯತ್ನ ಮಾಡಿದರು. ಆದರೆ, ಪ್ರದಾನ ಶೆಟ್ಟಿ ತರಬೇತಿ ಪೂರ್ಣಗೊಳಿಸುವ ಯಾವುದೇ ಲಕ್ಷಣ ಕಾಣಲಿಲ್ಲ. ವಿದ್ಯಾರ್ಥಿಗಳಿಗೂ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಇದರಿಂದ ವಿದ್ಯಾರ್ಥಿಗಳು ಸಿಟ್ಟಾದರು. ಪ್ರಾಚಾರ್ಯ ಶ್ರೀನಾಥ ಪೈ ಅವರಲ್ಲಿ ತಮ್ಮ ಅಳಲು ತೋಡಿಕೊಂಡರು. ವಿದ್ಯಾರ್ಥಿಗಳಿಗೆ ಆದ ಮೋಸದ ಬಗ್ಗೆ ಶ್ರೀನಾಥ ಪೈ ಅವರು ಧ್ವನಿ ಎತ್ತಿದರು. ಆದರೂ, ವಿಶಿಷ್ಟಾ ಅಕಾಡೆಮಿಯವರು ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಪ್ರದಾನ ಶೆಟ್ಟಿ ಅವರು ಕೈಗೆ ಸಿಗಲಿಲ್ಲ.
ಈ ಎಲ್ಲಾ ಹಿನ್ನಲೆ 7.64 ಲಕ್ಷ ರೂ ವಂಚಿಸಿದ ಪ್ರದಾನ ಶೆಟ್ಟಿ ವಿರುದ್ಧ ಶ್ರೀನಾಥ ಪೈ ಅವರು ಪೊಲೀಸ್ ದೂರು ನೀಡಿದರು. `24 ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ’ ಎಂದು ಅವರು ಪ್ರಕರಣ ದಾಖಲಿಸಿದರು. ಪೊಲೀಸರು ಈ ಬಗ್ಗೆ ಸಾಕ್ಷಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.
