ಭಟ್ಕಳದ ಶಿರಾಲಿಯ ಅಮೀರ್ ಹಸನ್ ಬ್ಯಾರಿ ಹಾಗೂ ಮುಗ್ದಂ ಕಾಲೋನಿಯ ಮಹ್ಮದ್ ಇಮ್ರಾನ್ ಅಬ್ದುಲ್ ಗಫರ್ ಸೇರಿ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ದರೋಡೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿನ್ನಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಅವರಿಬ್ಬರನ್ನು ಬಂಧಿಸಿದ್ದಾರೆ.
ಶಿರಾಲಿಯ ಅಮೀರ್ ಹಸನ್ ಬ್ಯಾರಿ (27) ಹಾಗೂ ಮುಗ್ದಂ ಕಾಲೋನಿಯ ಮಹ್ಮದ್ ಇಮ್ರಾನ್ ಅಬ್ದುಲ್ ಗಫರ್ (24) ಸೇರಿ ಸೋಮವಾರ ರಾತ್ರಿ ದೇವಸ್ಥಾನದೊಳಗೆ ನುಗ್ಗಿದ್ದರು. ಅಲ್ಲಿದ್ದ ಸಿಸಿ ಕ್ಯಾಮೆರಾಗೆ ಬಟ್ಟೆ ಹಾಗೂ ಲೋಟ ಮುಚ್ಚಿ ಕಾಣಿಕೆ ಹುಂಡಿ ಒಡೆದಿದ್ದರು. ಅಲ್ಲಿದ್ದ ಹಣ ಕದ್ದು ಅವರಿಬ್ಬರು ಪರಾರಿಯಾಗಿದ್ದರು.
ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರ ದೂರು ಆಧರಿಸಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿದರು. ಈ ವೇಳೆ ಸಿಕ್ಕ ಚಿಕ್ಕ ಸುಳಿವು ಕಳ್ಳರ ಪತ್ತೆಗೆ ನೆರವಾಯಿತು. ಸಿಪಿಐ ಮಂಜುನಾಥ ಲಿಂಗಾರೆಡ್ಡಿಯ ನೇತೃತ್ವದ ತಂಡವು ಕಳ್ಳರಿಬ್ಬರನ್ನು ಬಂಧಿಸಿತು. ಬಂಧಿತರ ಬಳಿ 1.80 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕು ಸಿಕ್ಕಿದೆ. ಪೊಲೀಸರು ಅವನ್ನು ವಶಕ್ಕೆಪಡೆದಿದ್ದಾರೆ.
