ಕಾರವಾರದಿಂದ ಮುಂಬೈಗೆ ಹೋಗುತ್ತಿದ್ದ ರೈಲಿನಿಂದ ಬಿದ್ದ ನೌಕಾನೆಲೆ ಅಧಿಕಾರಿ ಸಕೇತ ಕಶ್ಯಪ್ ಅವರನ್ನು ನಂದನಗದ್ದಾದ ನಾಗಪ್ರಸಾದ್ ರಾಯ್ಕರ್ ಅವರು ಕಾಪಾಡಿದ್ದಾರೆ. ಈ ಹಿನ್ನಲೆ ನೌಕಾನೆಲೆ ಅಧಿಕಾರಿಗಳು ನಾಗಪ್ರಸಾದ್ ರಾಯ್ಕರ್ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಐಎನ್‌ಎಸ್ ತಬರ್ ನೌಕೆಯಲ್ಲಿ ಅಧಿಕಾರಿಯಾಗಿದ್ದ ಸಕೇತ ಕಶ್ಯಪ್ ಅವರು ಅಗಸ್ಟ 1ರಂದು ರೈಲಿನಲ್ಲಿ ಹೋಗುತ್ತಿದ್ದರು. ರೈಲಿನ ಒಳಗೆ ಕಾಲು ಜಾರಿದ್ದರಿಂದ ಅವರು ನೆಲಕ್ಕೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಸಕೇತ ಕಶ್ಯಪ್ ಅವರು ಇನ್ನೊಂದು ರೈಲ್ವೆ ಹಳಿ ಮೇಲೆ ಬಿದ್ದು ನರಳಾಡುತ್ತಿದ್ದರು. ಆ ವೇಳೆ ರೈಲು ಬಂದರೆ ಸಕೇತ ಕಶ್ಯಪ್ ಅವರು ಜೀವಂತವಾಗಿರುವ ಸಾಧ್ಯತೆಗಳಿರಲಿಲ್ಲ.
ಕಾರವಾರ ನಗರದ ನಂದನಗದ್ದಾ ಬಡಾವಣೆಯಲ್ಲಿ ಬಂಗಾರದ ಕೆಲಸ ಮಾಡುವ ನಾಗಪ್ರಸಾದ್ ರಾಯ್ಕರ್ ಅವರಿಗೆ ಸಕೇತ ಕಶ್ಯಪ್ ಅವರ ನರಳಾಟದ ಸದ್ದು ಕೇಳಿಸಿತು. ಹತ್ತಿರ ಹೋಗಿ ನೋಡಿದಾಗ ಸಕೇತ್ ಕಶ್ಯಪ್ ಅವರು ಜ್ಞಾನ ತಪ್ಪಿ ಬಿದ್ದಿದ್ದರು. ನಾಗಪ್ರಸಾದ ರಾಯ್ಕರ್ ಅವರು ಸಕೇತ ಕಶ್ಯಪ್ ಅವರನ್ನು ರೈಲಿನ ಹಳಿಗಳಿಂದ ದೂರ ಸರಿಸಿದರು. ಅದಾದ ಮೇಲೆ ತಮ್ಮದೇ ಬೈಕಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದರು.
ರೈಲಿನಿoದ ಬಿದ್ದಿದ್ದ ನೌಕಾನೆಲೆ ಅಧಿಕಾರಿ ಸಕೇತ ಕಶ್ಯಪ್ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ತೀವೃ ಪ್ರಮಾಣದಲ್ಲಿ ರಕ್ತಸ್ರಾವವಾಗಿದ್ದು, ಮೈಗೆ ರಕ್ತ ಅಂಟಿದನ್ನು ಲೆಕ್ಕಿಸದೇ ನಾಗಪ್ರಸಾದ ಅವರು ಸಕೇತ್ ಅವರನ್ನು ರಕ್ಷಿಸಿದ್ದರು. ಆಸ್ಪತ್ರೆ ವೈದ್ಯರು ತುರ್ತು ಚಿಕಿತ್ಸೆ ಮೂಲಕ ಸಕೇತ ಕಶ್ಯಪ್ ಅವರನ್ನು ಬದುಕಿಸಿದರು. ಅದಾದ ನಂತರ ನೌಕಾನೆಲೆ ಅಧಿಕಾರಿಗಳು ಆಸ್ಪತ್ರೆ ಬಂದು ಸಕೇತ್ ಅವರನ್ನು ನೌಕಾನೆಲೆ ಅಧೀನದ ಪತಂಜಲಿ ಆಸ್ಪತ್ರೆಗೆ ದಾಖಲಿಸಿದರು.
ಸದ್ಯ ಸಕೇತ ಕಶ್ಯಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮನ್ನು ರಕ್ಷಣೆ ಮಾಡಿದವರನ್ನು ನೋಡಬೇಕು ಎಂದು ಪರಿತಪಿಸಿದ ಅವರು ನಾಗಪ್ರಸಾದ್ ಅವರನ್ನ ಸಂಪರ್ಕಿಸಿದರು. ಬುಧವಾರ ನೌಕಾನೆಲೆಗೆ ಬರುವಂತೆ ಆಹ್ವಾನ ನೀಡಿದರು. ನೌಕಾನೆಲೆ ಅಧಿಕಾರಿಗಳು ನಾಗಪ್ರಸಾದ ಅವರನ್ನು ಗೌರವಿಸಿ ಉಡುಗರೆಗಳನ್ನು ನೀಡಿದರು.
Discussion about this post