ಕಾರವಾರ ನಗರಸಭೆ ವ್ಯಾಪ್ತಿಯ ಬಿಣಗಾದಲ್ಲಿ ಶ್ವೇತಾ ಕಲಾಲ್ ಅವರು 30 ವರ್ಷದಿಂದ ಮಟನ್ ಅಂಗಡಿ ನಡೆಸುತ್ತಿದ್ದು, ನಗರಸಭೆ ಅಧಿಕಾರಿಗಳು ಏಕಾಏಕಿ ಅದನ್ನು ತೆರವು ಮಾಡಿದ್ದಾರೆ. ಹೀಗಾಗಿ ಶ್ವೇತಾ ಕಲಾಲ್ ಅವರು ನಗರಸಭೆ ಎದುರು ಮಟನ್ ಮಾರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ತಮಗಾದ ಅನ್ಯಾಯದ ಬಗ್ಗೆ ಜನಶಕ್ತಿ ವೇದಿಕೆಯವರಿಗೆ ತಿಳಿಸಿ, ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ.
ಬಿಣಗಾ ಗ್ರಾಮದ ಪೋಟ್ಲವಾಡದಲ್ಲಿ ಶ್ವೇತಾ ಕಲಾಲ್ ಅವರ ಕುಟುಂಬದವರು 60 ವರ್ಷಗಳಿಂದ ಮಟನ್ ಮಾರುತ್ತಿದ್ದರು. 30 ವರ್ಷಗಳಿಂದ ಶ್ವೇತಾ ಕಲಾಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಅಲ್ಲಿನ ಗೃಂಥಾಲಯದವರ ದೂರಿನ ಪ್ರಕಾರ ನಗರಸಭೆಯವರು ಮಟನ್ ಅಂಗಡಿ ತೆರವು ಮಾಡಿದರು. ಈ ಹಿನ್ನಲೆ ಊರಿನವರು ಸಹ ಶ್ವೇತಾ ಕಲಾಲ್ ಅವರ ಬೆಂಬಲಕ್ಕೆ ನಿಂತರು. ಗೃಂಥಾಲಯದವರ ಕಿತಾಪತಿ ಅರಿತ ಜನ `ನಮಗೆ ಆ ಗೃಂಥಾಲಯ ಬೇಡ. ಮಟನ್ ಅಂಗಡಿ ಅಲ್ಲಿಯೇ ಬೇಕು’ ಎಂದು ಜನ ಪಟ್ಟು ಹಿಡಿದರು. `ಗೃಂಥಾಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪುಕ್ಕಟ್ಟೆ ಮಟನ್ ನೀಡದ ಕಾರಣ ತಮ್ಮ ವಿರುದ್ಧ ಕಾನೂನು ಕ್ರಮವಾಗಿದೆ’ ಎಂದವರು ಅಳಲು ತೋಡಿಕೊಂಡರು.
ಗುರುವಾರ ಸ್ಥಳೀಯ ಗ್ರಾಮಸ್ಥರು ಮತ್ತು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರೊಂದಿಗೆ ಸೇರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಶ್ವೇತಾ ಕಲಾಲ್ ಅವರು ತಹಸೀಲ್ದಾರ್ ನಿಶ್ಚಲ ನರೋನಾ ಅವರಿಗೆ ಮನವಿ ಸಲ್ಲಿಸಿದರು. `ಕುರಿ ಮಾಂಸ ಮಾರಾಟಕ್ಕೆ ನಗರಸಭೆಯಿಂದ ಅನುಮತಿ ಪಡೆಯಲಾಗಿದ್ದರೂ ಅದನ್ನು ತೆರವು ಮಾಡಲಾಗಿದೆ’ ಎಂದು ದೂರಿದರು. `ಮೂರು ವರ್ಷಗಳ ಹಿಂದೆ ಪತಿ ನಿಧನರಾದ ನಂತರ ಮೂವರು ಹೆಣ್ಣುಮಕ್ಕಳೊಂದಿಗೆ ಜೀವನ ಸಾಗಿಸಲು ಬೇರೆ ದಾರಿಯಿಲ್ಲದೇ ಅಂಗಡಿ ಮುನ್ನಡೆಸುತ್ತಿದ್ದೇನೆ. ಯಾವುದೇ ನೋಟಿಸ್ ನೀಡದೆ ನಗರಸಭೆ ಅಧಿಕಾರಿಗಳು ಏಕಾಏಕಿ ಬುಧವಾರ ಅಂಗಡಿಯನ್ನು ತೆರವುಗೊಳಿಸಿದ್ದಾರೆ’ ಎಂದು ವಿವರಿಸಿದರು.
‘ಶ್ವೇತಾ ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆ. ಸಮೀಪದಲ್ಲೇ ಇರುವ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳೆ ಮತ್ತವಳ ಪತಿಯು ನೀಡಿದ ತಪ್ಪು ಮಾಹಿತಿಯಿಂದಾಗಿ ಮಹಿಳೆಯ ಅಂಗಡಿಯನ್ನು ತೆರವುಗೊಳಿಸಲಾಗಿದೆ. ಕೂಡಲೇ ಜೀವನಾಧಾರವಾದ ಅಂಗಡಿಯನ್ನು ನಗರಸಭೆಯವರು ಪುನರ್ ನಿರ್ಮಿಸಿಕೊಡಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದರು. ಗ್ರಾಮಸ್ಥರಾದ ಜ್ಯೋತಿ ಗಣಪತಿ ನಾಯ್ಕ, ಶ್ವೇತಾ ನಾಯ್ಕ, ರೇವತಿ ನಾಯ್ಕ, ಹಸೀನಾ ಅಣ್ಣೀಗೇರಿ ಸಹ ಶ್ವೇತಾ ಕಲಾಲ್ ಅವರ ಬೆಂಬಲಕ್ಕಿದ್ದರು.
Discussion about this post