ಶರಾವತಿ ಪಂಪ್ ಸ್ಟೋರೇಜ್ ವಿಷಯವಾಗಿ ಗುರುವಾರ ಸಾರ್ವಜನಿಕ ಅಹವಾಲು ಸಭೆ ನಡೆದಿದ್ದು, ಒಟ್ಟು 4043 ಅರ್ಜಿಗಳು ಜಿಲ್ಲಾಡಳಿತದ ಕಡತ ಸೇರಿವೆ. ಸಾವಿರ ಸಂಖ್ಯೆಯ ಜನ ಬಂದಿದ್ದರೂ ಯೋಜನೆ ಪರವಾಗಿ ಒಬ್ಬರು ಸಹ ಅರ್ಜಿ ಸಲ್ಲಿಸಿಲ್ಲ!
ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜೀವನದಿಯಾಗಿರುವ ಶರಾವತಿ ನದಿಗೆ ಅಡ್ಡಲಾಗಿ ಸರ್ಕಾರ ಪಂಪ್ ಸ್ಟೋರೇಜ್ ಯೋಜನೆ ರೂಪಿಸಲು ನಿರ್ಧರಿಸಿದೆ. ಇದಕ್ಕಾಗಿ ಯೋಜನೆ ಅನುಷ್ಠಾನಕ್ಕಾಗಿ ಸೂಕ್ಷ್ಮ ಪ್ರದೇಶದಲ್ಲಿ 16041 ಮರಗಳನ್ನು ಕಡಿಯಲಾಗುತ್ತದೆ. ಜೊತೆಗೆ ಅಪರೂಪದಲ್ಲಿಯೇ ಅಪರೂಪವಾಗಿರುವ ಸಿಂಹ ಬಾಲದ ಕೋತಿಗೆ ಈ ಯೋಜನೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಅನೇಕರು ಯೋಜನೆಗೆ ವಿರೋಧವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಯೋಜನೆ ವಿರೋಧವಾಗಿ ಭಾರೀ ಪ್ರಮಾಣದಲ್ಲಿ ಜನ ಜಾಗೃತಿ ನಡೆದಿದೆ.
`ಶರಾವತಿ ಉಳಿಸಿಕೊಳ್ಳಲು ಕೊನೆಯ ಅವಕಾಶ’ ಎನ್ನುವ ಬಗ್ಗೆ ಸಾರ್ವಜನಿಕ ಅಹವಾಲು ಸಭೆಯ ಬಗ್ಗೆ ಮಾಹಿತಿ ಪ್ರಸಾರವಾಗಿದ್ದು, ಮೂಕಜೀವಗಳ ಪರವಾಗಿ ಈ ದಿನ ಜನ ಮಾತನಾಡಿದರು. ಬೈಕ್ ರ‍್ಯಾಲಿಗಳ ಮೂಲಕ ಸರ್ಕಾರಕ್ಕೆ ತಮ್ಮ ವಿರೋಧವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಸಹ ಪರಿಸರವಾದಿಗಳು ಯೋಜನೆಗೆ ವಿರೋಧ ಮಾಡಿದ್ದು, ಹೊನ್ನಾವರದಲ್ಲಿಯೂ ಅದೇ ಮಾತು ಪ್ರತಿಧ್ವನಿಸಿತು.
ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡದೇ ಅಧಿಕಾರಿಗಳು ಪೇಜಿಗೆ ಸಿಲುಕಿದರು. ಬಂಗಾರಮಕ್ಕಿಯ ಮಾರುತಿ ಗುರೂಜಿಯವರು ರಾತ್ರಿಯವರೆಗೂ ಸಭೆ ನಡೆಯುವ ಸ್ಥಳದಲ್ಲಿಯೇ ಇದ್ದು ಯೋಜನೆಯನ್ನು ಖಂಡಿಸಿದರು. ತಮ್ಮ ಮಾತಿನಲ್ಲಿಯೂ ಸಹ ಮಾರುತಿ ಗುರೂಜಿ ಯೋಜನೆಯ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದರು. ಯೋಜನೆಗೆ 54.15 ಹೆಕ್ಟೇರ್ ಅರಣ್ಯ ಅಗತ್ಯವಿದ್ದು, ಇಲ್ಲಿ ಕಡಿದ ಮರಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರಿನಲ್ಲಿ ಗಿಡ ನೆಡುವ ವಿಧಾನ ಟೀಕೆಗೆ ಒಳಗಾಯಿತು.
ಈ ಯೋಜನೆಯಿಂದ ಅಪರೂಪದ ಸಸ್ಯ ಸಂಪತ್ತು, ವನ್ಯಜೀವಿಗಳಿರುವ ಹೊನ್ನಾವರ ಅರಣ್ಯ ವಿಭಾಗ ಅಲ್ಲಲ್ಲಿ ಬರಡಾಗುವ ಬಗ್ಗೆ ಜನ ಆತಂಕವ್ಯಕ್ತಪಡಿಸಿದರು. ಭೂಮಿಯ ಒಳಗೆ 7ಕಿಮೀ ಸುರಂಗ ತೆರೆಯುವುದನ್ನು ತಡೆಯುವುದಾಗಿ ಹೇಳಿದರು. ಹೊನ್ನಾವರದ ನಗರಬಸ್ತಿಕೇರಿ, ಗೇರುಸೊಪ್ಪ, ಬೆಗೊಡಿ ಗ್ರಾಮಗಳ 24.31 ಹೆಕ್ಟೇರ್ ಖಾಸಗಿ ಜಮೀನು ಈ ಯೋಜನೆಗೆ ಬಲಿ ಆಗುವುದನ್ನು ಕೇಳಿ ಆತಂಕವ್ಯಕ್ತಪಡಿಸಿದರು. ಈ ವ್ಯಾಪ್ತಿಯಲ್ಲಿ ಬರುವ ಮನೆ, ದೇವಾಲಯ, ಅಂಗನವಾಡಿಗಳನ್ನು ಬಿಟ್ಟು ಕೊಡುವುದಿಲ್ಲ ಎಂದು ಶಪಥ ಮಾಡಿದರು.
Discussion about this post