ಯಲ್ಲಾಪುರದ ತಿಮ್ಮಯ್ಯ ಪಟಗಾರ ಅವರ ಮನೆ ಬಳಿ ಬಂದಿದ್ದ ಹಾವು ಬಲೆಗೆ ಸಿಕ್ಕಿ ಬಿದ್ದಿದ್ದು, ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ಬಾಳಗಿಮನೆಯ ಬಾವಿಯ ಬಳಿ ಬಲೆಯೊಳಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಉರಗಕ್ಕೆ ಮರುಜನ್ಮ ಸಿಕ್ಕಿದೆ.
ಯಲ್ಲಾಪುರ ಪಟ್ಟಣದ ಬಾಳಗಿಮನೆ ಶಾಲೆ ಹಿಂದಿನ ಪ್ರದೇಶದಲ್ಲಿ ವಾಸವಾಗಿರುವ ತಿಮ್ಮಯ್ಯ ಪಟಗಾರ ಅವರು ತಮ್ಮ ಬಾವಿಯ ಸುರಕ್ಷತೆಗಾಗಿ ಬಲೆ ಅಳವಡಿಸಿದ್ದರು. ಮರದ ಎಲೆ ಬೀಳದಂತೆ ಅವರು ಅಳವಡಿಸಿದ್ದ ಬಲೆಗೆ ಶುಕ್ರವಾರ ನಾಗರ ಹಾವು ಸಿಕ್ಕಿ ಬಿದ್ದಿತು. ಬಲೆಯಿಂದ ತಪ್ಪಿಸಿಕೊಳ್ಳಲಾಗದೇ ಆ ಹಾವು ಪರಿತಪಿಸಿದ್ದು, ಇದನ್ನು ನೋಡಿದ ಮನೆಯವರು ಅಲ್ಲಿನ ಸಂತೋಷ ಬಂಟ್ ಅವರಿಗೆ ತಿಳಿಸಿದರು. ಸಂತೋಷ ಬಂಟ್ ಅವರು ಅರಣ್ಯ ಇಲಾಖೆಗೆ ಫೋನ್ ಮಾಡಿದರು.
ಅರಣ್ಯ ಸಿಬ್ಬಂದಿ ಶನಾಜ ಮುಲ್ತಾನಿ ಹಾಗೂ ಗೌಡಪ್ಪ ಸುಳ್ಯದವರ್ ಸ್ಥಳಕ್ಕೆ ಬಂದರು. ಬಲೆಗೆ ಸಿಕ್ಕ ಹಾವು ರಕ್ಷಿಸಲು ವಿವಿಧ ಕ್ರಮ ಅನುಸರಿಸಿದರು. ಪ್ರಣವ ಭಟ್ಟ ಅವರ ನೆರವುಪಡೆದು ನಿಧಾನವಾಗಿ ಬಲೆಯನ್ನು ತುಂಡರಿಸಿ ಹಾವನ್ನು ರಕ್ಷಿಸಿದರು. ನಾಗರ ಹಾವಿಗೆ ಎಲ್ಲಿಯೂ ಗಾಯವಾಗಿರಲಿಲ್ಲ. ಹೀಗಾಗಿ ಬಲೆಯಿಂದ ಹೊರಬಿದ್ದ ತಕ್ಷಣ ಅಲ್ಲೇ ಇರುವ ಪಕ್ಕದ ಕಾಡಿಗೆ ಹಾವು ಸೇರಿತು.
Discussion about this post