ಯಲ್ಲಾಪುರದ ಸುಬ್ರಾಯ ಭಟ್ಟ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳತನಕ್ಕೆ ಬಂದವರು ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್’ನ್ನು ಅಪಹರಿಸಿದ್ದಾರೆ!
ಯಲ್ಲಾಪುರದ ಹೆಮ್ಮಾಡಿಯ ಭರಣಿಯಲ್ಲಿ ಸುಬ್ರಾಯ ಅಣ್ಣಯ್ಯ ಭಟ್ಟ (72) ಅವರು ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು. ಸೆ 18ರಂದು ಮಧ್ಯಾಹ್ನ 3 ಗಂಟೆಗೆ ಅವರು ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. 4 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬೀಗ ಮುರಿದಿತ್ತು.
ಮನೆಯ ಒಳಗೆ ಹೋಗಿ ನೋಡಿದಾಗ 30 ಸಾವಿರ ರೂಪಾಯಿಗಳಿದ್ದ ನೋಟಿನ ಕಟ್ಟು ಮಾಯವಾಗಿತ್ತು. ತಾಮ್ರ ಹಾಗೂ ಹಿತ್ತಾಳೆ ತಂಬಿಗೆಯಲ್ಲಿದ್ದ 5 ಸಾವಿರ ರೂ ಚಿಲ್ಲರೆ ಹಣವೂ ಕಾಣಲಿಲ್ಲ. ಕೋಣೆಯಲ್ಲಿದ್ದ 2 ರೇಶ್ಮೆ ಸೀರೆಯನ್ನು ಸಹ ಕಳ್ಳರು ಅಪಹರಿಸಿದ್ದರು. ದೇವರಮನೆಯಲ್ಲಿದ್ದ ಬೆಳ್ಳಿ ದೀಪ, ಬೆಳ್ಳಿ ಆಕಳುವಿನ ಜೊತೆ ವಿವಿಧ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಕಳ್ಳರು ಯಾರು? ಎಂದು ನೋಡುವುದಕ್ಕಾಗಿ ಸುಬ್ರಾಯ ಭಟ್ಟ ಅವರ ಕುಟುಂಬದವರು ಸಿಸಿ ಕ್ಯಾಮರಾ ನೋಡಿದರು. ಆದರೆ, ಕಳ್ಳರು ಸಿಸಿ ಕ್ಯಾಮರಾದ ಡಿವಿಆರ್’ನ್ನು ಅಪಹರಿಸಿದ್ದರು. ಈ ಹಿನ್ನಲೆ ಸುಬ್ರಾಯ ಭಟ್ಟರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳರ ಹುಡುಕಾಟ ಶುರು ಮಾಡಿದರು.
