ಕುಮಟಾದ ಕೃಷಿ ಜಮೀನಿಗೆ ಆಗಮಿಸಿದ ಚಿರತೆ ಅಲ್ಲಿದ್ದ ಮುಳ್ಳು ಚುಚ್ಚಿಸಿಕೊಂಡು ಸಾವನಪ್ಪಿದೆ. ಮುಳ್ಳಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಚಿರತೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಕುಮಟಾದ ದೇವಗಿರ ಗ್ರಾಮ ಪಂಚಾಯತ ವ್ಯಾಪ್ತಿಯ ಹರಭಾಗದ ಕೃಷಿ ಜಮೀನಿಗೆ ಭಾನುವಾರ ಹೆಣ್ಣು ಚಿರತೆ ಆಗಮಿಸಿತ್ತು. 1 ವರ್ಷ ಪ್ರಾಯದ ಆ ಚಿರತೆ ಅಲ್ಲಿನ ಮುಳ್ಳಿನ ಪೊದೆಯೊಳಗೆ ನುಗ್ಗಿತು. ಆದರೆ, ಅಲ್ಲಿಂದ ಸುರಕ್ಷಿತವಾಗಿ ಹೊರ ಬರಲು ಚಿರತೆ ಬಳಿ ಸಾಧ್ಯವಾಗಲಿಲ್ಲ. ಸಾಕಷ್ಟು ಹೋರಾಟದ ನಂತರ ಅಲ್ಲಿಯೇ ನಿತ್ರಾಣಗೊಂಡಿದ್ದ ಚಿರತೆಯನ್ನು ಜನ ನೋಡಿದರು. ತಕ್ಷಣ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರು.
ಕುಮಟಾ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ಚಿರತೆ ನೋಡಲು ಬಂದರು. ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಅಶೋಕ ನಾಯ್ಕ ತದಡಿ, ಮಹೇಶ ನಾಯ್ಕ ಅವರ್ಸಾ, ನಾಗರಾಜ ಶೇಟ್ ಹಳದಿಪುರ, ಪವನ ನಾಯ್ಕ ಕುಮಟಾ ಅವರನ್ನು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಕರೆಯಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಸಿ ಆರ್ ನಾಯ್ಕ, ರಾಘವೇಂದ್ರ ನಾಯ್ಕ, ಗೌರಿಶಂಕರ ರಾಯ್ಕರ, ಮುತುರ್ಜಾ, ಸಂಗಮೇಶ ದಿನೇಶ ಆಚಾರಿ, ಮಹೇಶ ಹರ್ಮಲಕರ್ ಮೊದಲಾದವರು ಚಿರತೆಯನ್ನು ಅಲ್ಲಿಂದ ಹೊರ ತರಲು ಪ್ರಯತ್ನಿಸಿದರು. ಸಂತೋಷ, ಬೀರಾ ಗೌಡ, ಅನಿಲ, ಬಲಿಯಾ, ಭಾವಾ ಗೌಡ, ಸದಾನಂದ ನಾಯ್ಕ, ಕಮಲಾಕರ ಬಂಡಾರಿ, ಪಾಂಡುರoಗ ಪಟಗಾರ ಸೇರಿ ರಕ್ಷಣಾ ಕಾರ್ಯಾಚರಣೆ ಮಾಡಿದರು.
ಡಿಎಫ್ಓ ಯೋಗಿಶ ಹಾಗೂ ಎಸಿಎಪ್ ಕೃಷ್ಣ ಗೌಡ ಅವರು ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿದರು. ವೈದ್ಯರು ಚಿರತೆಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ಶುರು ಮಾಡಿದರು. ಪ್ರಾಥಮಿಕ ಚಿಕಿತ್ಸೆಯ ನಂತರ ಎರಡು ತಾಸು ಉಸಿರಾಡುತ್ತಿದ್ದ ಆ ಚಿರತೆ ಅಲ್ಲಿಯೇ ಕೊನೆಯುಸಿರೆಳೆಯಿತು.
Discussion about this post