`ಬಿಜೆಪಿ ಸರ್ಕಾರದ ಅವಧಿಯಲ್ಲಿ ಶುರುವಾದ ಆಸ್ಪತ್ರೆ ಕೆಲಸ ಮುಕ್ತಾಯವಾದರೆ ಅದರ ಯಶಸ್ಸು ಬಿಜೆಪಿಗೆ ಸಿಗುತ್ತದೆ. ಹೀಗಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಾಸಕತ್ವ ಅವಧಿಯಲ್ಲಿ ಶಿರಸಿಗೆ ಮಂಜೂರಾದ ಆಸ್ಪತ್ರೆ ಕೆಲಸವನ್ನು ಈಗಿನ ಶಾಸಕ ಭೀಮಣ್ಣ ನಾಯ್ಕ ಅವರು ನಿಧಾನವಾಗಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈಗಿನ ಶಾಸಕರು ಆಸ್ಪತ್ರೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯವರೆಗೂ ಆಸ್ಪತ್ರೆ ವಿಷಯದಲ್ಲಿ ಕಾಲಹರಣ ಮಾಡುವ ಸಾಧ್ಯತೆಯಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿದರೆ ಮಾತ್ರ ಆಸ್ಪತ್ರೆ ಪೂರ್ಣಗೊಳಿಸುವೆ’ ಎನ್ನುವ ಸಾಧ್ಯತೆ ಹೆಚ್ಚಿದೆ’ ಎಂಬ ಅನುಮಾನವ್ಯಕ್ತಪಡಿಸಿದರು.
`ಆಸ್ಪತ್ರೆಯಲ್ಲಿ ಶೇ 80ರಷ್ಟು ಕೆಲಸ ಮುಗಿದಿದೆ. ಆದರೂ, ವೈದ್ಯರ ನೇಮಕಾತಿ ನಡೆದಿಲ್ಲ. ಯಂತ್ರೋಪಕರಣಗಳ ಟೆಂಡರ್ ಸಹ ಆಗಿಲ್ಲ’ ಎಂದು ವಿವರಿಸಿದರು. `30 ದಿನದ ಒಳಗೆ ಯಂತ್ರೋಪಕರಣಗಳ ಟೆಂಡರ್ ಆಗದೇ ಇದ್ದರೆ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಆಸ್ಪತ್ರೆ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸಲಾಗುತ್ತದೆ. ಎಂದು ಎಚ್ಚರಿಸಿದರು.
`ಹೋರಾಟಗಾರರ ವಿರುದ್ಧ ಶಾಸಕ ಭೀಮಣ್ಣ ನಾಯ್ಕ ಅವರು ಅಸಂವಿಧಾನಾತ್ಮಕ ಶಬ್ದ ಬಳಸಿ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ವಿಷಯವಾಗಿ ಪ್ರಶ್ನಿಸಿದರೆ ನಾಟಕೀಯ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ದೂರಿದರು. `ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳ ವೈದ್ಯರು ತಮ್ಮ ಕ್ಷೇತ್ರದಲ್ಲಿ ಜನ ಸ್ಪಂದನ ಅಥವಾ ಜನತಾ ದರ್ಶನ ಕಾರ್ಯಕ್ರಮ ಪ್ರತಿ ತಿಂಗಳು ಮಾಡುತ್ತಿದ್ದಾರೆ. ಶಿರಸಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಶಾಸಕರು ಜನಸ್ಪಂದನಾ ಕಾರ್ಯಕ್ರಮ ನಡೆಸಬೇಕು’ ಎಂದು ಆಗ್ರಹಿಸಿದರು.
Discussion about this post