ಸಿದ್ದಾಪುರದ ಹುಚ್ಚಪ್ಪ ಮಡಿವಾಳ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಹುಚ್ಚಪ್ಪ ಅವರ ಮನೆ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿದ್ದು, ಮನೆಯೊಳಗಿನ ಮಂಚದ ಮೇಲೆ ಅವರು ಶವವಾಗಿ ಪತ್ತೆ ಆಗಿದ್ದಾರೆ.
ಸಿದ್ದಾಪುರದ ಮನಮನೆಯ ಮಡಿವಾಳಕೇರಿಯಲ್ಲಿ ಹುಚ್ಚಪ್ಪ ಮಡಿವಾಳ (38) ಅವರು ಗಾರೇ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿ ತಮ್ಮ ಪತ್ನಿ ರೇಖಾ ಹಾಗೂ ಮಕ್ಕಳಾದ ಸಂಜು ಮತ್ತು ತೇಜು ಅವರ ಜೊತೆ ವಾಸವಾಗಿದ್ದರು. ಸರಾಯಿ ಕುಡಿತಕ್ಕೆ ಒಳಗಾಗಿದ್ದ ಹುಚ್ಚಪ್ಪ ಮಡಿವಾಳ ಅವರು ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದರು. ಅನೇಕ ಬಾರಿ ಊರಿನ ಹಿರಿಯರು ಆ ಜಗಳ ತಪ್ಪಿಸಿ ರಾಜಿ ಮಾಡಿಸಿದ್ದರು.
ಸೆ 20ರ ರಾತ್ರಿ 11 ಗಂಟೆಗೆ ಹುಚ್ಚಪ್ಪ ಮಡಿವಾಳ ಅವರ ಮನೆಯಿಂದ ದೊಡ್ಡ ಗಲಾಟೆ ಕೇಳಿಸಿತು. ಹುಚ್ಚಪ್ಪ ಮಡಿವಾಳ ಅವರ ತಂದೆ ನಾರಾಯಣ ಮಡಿವಾಳ ಅವರು ಅಲ್ಲಿಗೆ ತೆರಳಿ ಜಗಳ ಮಾಡುತ್ತಿದ್ದವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಹುಚ್ಚಪ್ಪ ಮಡಿವಾಳ ಅವರು ಪತ್ನಿ ರೇಖಾ ಹಾಗೂ ಅವರ ತಮ್ಮನಾದ ಸಾಗರದ ರಾಘು ಜೊತೆ ಜಗಳ ಮಾಡುತ್ತಿದ್ದರು.
ಮರುದಿನ ಬೆಳಗ್ಗೆ ಹುಚ್ಚಪ್ಪ ಮಡಿವಾಳ ಅವರು ಎಲ್ಲಿಯೂ ಕಾಣಲಿಲ್ಲ. ಹೀಗಾಗಿ ನಾರಾಯಣ ಮಡಿವಾಳ ಅವರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಮಗನ ಮನೆಗೆ ಹೋದಾಗ ಮನೆ ಹೊರಗಡೆಯಿಂದ ಚಿಲಕ ಹಾಕಲಾಗಿತ್ತು. ಚಿಲಕ ತೆಗೆದು ಒಳಗೆ ಹೋಗಿ ನೊಡಿದಾಗ ಹುಚ್ಚಪ್ಪ ಮಡಿವಾಳ ಅವರು ಮಂಚದ ಮೇಲೆ ಮಲಗಿದ್ದರು. ಕರೆದರೂ ಅವರು ಮಾತನಾಡಲಿಲ್ಲ. ಮೈ ಮುಟ್ಟಿ ನೋಡಿದಾಗ ಹುಚ್ಚಪ್ಪ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿತು.
ಹಿAದಿನ ದಿನ ರಾತ್ರಿ ನಡೆದ ಗಲಾಟೆ, ಮನೆ ಮುಂದಿನ ಬಾಗಿಲಿಗೆ ಚಿಲಕ ಹಾಕಿದ್ದು ನೋಡಿದ ನಾರಾಯಣ ಮಡಿವಾಳ ಅವರು ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದರು.
Discussion about this post