ಅಂಕೋಲಾದ ರೋಹನ್ ನಾಯಕ ಅವರು ಸಹಕಾರಿ ಸಂಘದ ಸಭೆಯಲ್ಲಿ ಪ್ರಶ್ನಿಸಿ ಪೆಟ್ಟು ತಿಂದಿದ್ದಾರೆ. ಸಭೆ ಮುಗಿದ ದಿನ ರಾತ್ರಿ 11 ಗಂಟೆಗೆ ಅವರ ಮನೆಗೆ ನುಗ್ಗಿದ ನಾಲ್ವರು ಹಿಗ್ಗಾಮುಗ್ಗ ಥಳಿಸಿ ಪರಾರಿ ಆಗಿದ್ದಾರೆ.
ಅಂಕೋಲಾದ ವಂದಿಗೆ ಬಳಿಯ ಡಿಪೋ ಕ್ರಾಸ್ ಎದುರು ರೋಹನ್ ನಾಯಕ ಅವರು ಅಂಗಡಿ ನಡೆಸಿಕೊಂಡು ಜೀವನ ಮಾಡುತ್ತಿದ್ದಾರೆ. ರೋಹನ್ ನಾಯಕ ಅವರ ಅಣ್ಣ ರಂಜತ ನಾಯಕ ಅವರು ವಿವಿದೋದ್ದೇಶ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ. ಹೀಗಿರುವಾಗ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗಾಗಿ ವಿವಿದೋದ್ದೇಶ ರೈತರ ಸೇವಾ ಸಹಕಾರಿ ಸಂಘದ ಡೇಲಿಗೇಶನ್ ಕೊಡಿಸಲು ಪ್ರಕ್ರಿಯೆ ನಡೆದಿದ್ದು, ಆ ವೇಳೆ ಅಡ್ಲೂರಿನ ಗೋಪಾಲಕೃಷ್ಣ ನಾಯಕ ಅವರು ತಮ್ಮ ಆಪ್ತ ಸೂರಜ ನಾಯಕ ಅವರಿಗೆ ಡೇಲಿಗೇಶನ್ ಕೊಡಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ, ಅದಕ್ಕೆ ರಂಜತ್ ನಾಯಕ ಅವರು ಒಪ್ಪಿರಲಿಲ್ಲ. ಇದೇ ವಿಷಯ ಇದೀಗ ರೋಹನ್ ನಾಯಕ ಅವರ ಮೇಲಿನ ದಾಳಿಗೆ ಕಾರಣವಾಗಿದೆ.
ಸೂರಜ ನಾಯಕ ಅವರಿಗೆ ಡೇಲಿಗೇಶನ್ ಕೊಡಲಿಲ್ಲ ಎಂಬ ಕಾರಣಕ್ಕೆ ರಂಜತ ನಾಯಕ ಅವರ ವಿರುದ್ಧ ಅಡ್ಲೂರಿನ ಗೋಪಾಲಕೃಷ್ಣ ನಾಯಕ ಹಾಗೂ ವಂದಿಗೆಯ ಸೂರಜ ನಾಯಕ ಸಿಟ್ಟಾಗಿದ್ದರು. ಅವರ ಜೊತೆ ಬಾವಿಕೇರಿಯ ಸಮೃದ್ಧ ನಾಯಕ (ಚಿನ್ನು), ವಂದಿಗೆಯ ಪ್ರೀತಂ ನಾಯಕ, ಹನೀಶ ನಾಯಕ ಸಹ ರಂಜತ್ ನಾಯಕ ಅವರ ವಿರುದ್ಧ ಕಿಡಿಕಾರುತ್ತಿದ್ದರು. ಇದೇ ವಿಚಾರವಾಗಿ ಉಳಿದವರು ದ್ವೇಷ ಬೆಳೆದಿದ್ದು, ಅಂಕೋಲಾ ಸೂರ್ಯ ಹೊಟೇಲ್ ಬಳಿ ರಂಜತ್ ನಾಯಕ ಅವರ ಮೇಲೆ ಹಲ್ಲೆ ಪ್ರಯತ್ನವೂ ನಡೆದಿತ್ತು.
ಸೆ 21ರಂದು ವಿವಿದೋದ್ದೇಶ ರೈತರ ಸೇವಾ ಸಹಕಾರಿ ಸಂಘದ ಸಭೆ ನಡೆದಿದ್ದು, ಈ ಸಭೆಯಲ್ಲಿ ರೋಹನ್ ನಾಯಕ ಅವರು ಈ ಎಲ್ಲಾ ವಿಷಯವನ್ನು ಪ್ರಶ್ನಿಸಿದ್ದರು. ತಮ್ಮ ಅಣ್ಣನಿಗೆ ದಮ್ಕಿ ಹಾಕಿದ ಬಗ್ಗೆ ಅವರು ಪ್ರಸ್ತಾಪಿಸಿದ್ದರು. ಹೀಗಾಗಿ ಅಣ್ಣನ ಮೇಲಿದ್ದ ದ್ವೇಷ ತಮ್ಮನ ಮೇಲೆ ತಿರುಗಿದ್ದು, ಅದರ ಪರಿಣಾಮ ಸೆ 21ರ ರಾತ್ರಿ 11 ಗಂಟೆಗೆ ನಾಲ್ವರು ರೋಹನ ನಾಯಕ ಅವರ ಮನೆ ಬಳಿ ಬಂದರು. `ಹಳೆಯ ವಿಷಯದ ಬಗ್ಗೆ ಸಭೆಯಲ್ಲಿ ಪ್ರಶ್ನೆ ಮಾಡುತ್ತೀಯಾ?’ ಎಂದು ಪ್ರಶ್ನಿಸಿ ನಾಲ್ವರು ರೋಹನ ನಾಯಕ ಅವರ ತಲೆಮೇಲೆ ಗುದ್ದಿದರು. ಆ ನಾಲ್ವರ ಒಬ್ಬರ ಕೈಯಲ್ಲಿ ಬಳೆಯಿದ್ದು, ಅದರಿಂದ ಬಿದ್ದ ಪೆಟ್ಟು ರೋಹನ ನಾಯಕ ಅವರಿಗೆ ನೋವು ಮಾಡಿತು.
`ಗೋಪಾಲಕೃಷ್ಣ ನಾಯಕ ಹಾಗೂ ಸೂರಜ ನಾಯಕ ಅವರ ಕುಮ್ಮಕ್ಕಿನಿಂದಲೇ ಬಾವಿಕೇರಿಯ ಸಮೃದ್ಧ ನಾಯಕ (ಚಿನ್ನು), ವಂದಿಗೆಯ ಪ್ರೀತಂ ನಾಯಕ, ಹನೀಶ ನಾಯಕ ಸಹ ರಂಜತ್ ನಾಯಕ ಅವರು ತಮ್ಮ ಮೇಲೆ ದಾಳಿ ಮಾಡಿದ್ದಾರೆ’ ಎಂದು ರೋಹನ ನಾಯಕ ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
