ಕಾಮಿಡಿ ವಿಡಿಯೋಗಳನ್ನು ಹರಿಬಿಟ್ಟು ಯೂಟೂಬರ್ ಆಗಿ ಪ್ರಸಿದ್ಧಿಪಡೆದ ಧಾರವಾಡದ ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಹುಬ್ಬಳ್ಳಿಯ ಗಾಯತ್ರಿ ಅವರನ್ನು `ಅಕ್ಕ.. ಅಕ್ಕ’ ಎಂದು ಕರೆಯುತ್ತಿದ್ದರು. ಮುಂಡಗೋಡಿಗೆ ಬಂದ ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಇಲ್ಲಿನ ನಕಲಿ ವಿಳಾಸ ದಾಖಲೆಗಳನ್ನು ನೀಡಿ ಆ ಅಕ್ಕನನ್ನೇ ಅವರು ವಿವಾಹವಾಗಿದ್ದಾರೆ!
ಸೋಮವಾರ ಗಾಯತ್ರಿ ಅವರ ತಾಯಿ ಮುಂಡಗೋಡಿಗೆ ಆಗಮಿಸಿದ್ದು ತಮ್ಮ ನೋವು ತೋಡಿಕೊಂಡರು. `ತಮ್ಮ ಮಗಳು ಗಾಯತ್ರಿ ಅವರನ್ನು ಮುಕಳೆಪ್ಪ ಅಕ್ಕ ಅಕ್ಕ ಎನ್ನುತ್ತಿದ್ದ. ಆಗಾಗ ಆತ ಮನೆಗೂ ಬರುತ್ತಿದ್ದ. ಅಕ್ಕ ಎಂದು ಕರೆಯುತ್ತಿದ್ದ ಕಾರಣ ಆತನನ್ನು ನಾವು ಮನೆಗೆ ಬಿಟ್ಟುಕೊಂಡಿದ್ದು, ಗಾಯತ್ರಿ ಅವರನ್ನು ಮುಂಡಗೋಡಿಗೆ ಕರೆತಂದು ಮದುವೆ ಆಗಿದ್ದಾನೆ’ ಎಂದವರು ವಿವರಿಸಿದರು. ಉಪನೊಂದಣಾಧಿಕಾರಿ ಕಚೇರಿಗೆ ಆಗಮಿಸಿದ ಗಾಯತ್ರಿ ಅವರ ತಾಯಿ ತಮ್ಮ ಮಗಳನ್ನು ಮುಕಳೆಪ್ಪರಿಗೆ ಮದುವೆ ಮಾಡಿಸಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. `ಹಣದ ಆಸೆಗಾಗಿ ಮಗಳನ್ನು ದೂರ ಮಾಡಿದ ನೀವೆಲ್ಲ ಎಂದಿಗೂ ಉದ್ದಾರ ಆಗಲ್ಲ’ ಎನ್ನುತ್ತ ಕಣ್ಣೀರು ಸುರಿಸಿದರು. ಅಲ್ಲಿನ ಸಿಬ್ಬಂದಿ ಸಮಜಾಯಿಶೀ ಕೊಡಲು ತಡವರಿಸಿದರು.
ಲವ್ ಜಿಹಾದ್ ಬಗ್ಗೆ ಅರಿವಿದ್ದರೂ ಗಾಯತ್ರಿ ಅವರನ್ನು ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರಿಗೆ ಮದುವೆ ಮಾಡಿಸಿದ ಅಧಿಕಾರಿಗಳನ್ನು ಅವರು ತರಾಠೆಗೆ ತೆಗೆದುಕೊಂಡರು. ಶ್ರೀರಾಮ ಸೇನೆ ಮುಖ್ಯಸ್ಥರು ಸಹ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ಅಲ್ಲಿದ್ದ ಅಧಿಕಾರಿ-ಸಿಬ್ಬಂದಿಗೆ ಅನೇಕ ಪ್ರಶ್ನೆ ಮಾಡಿದರು. ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸಲು ನೋಂದಣಾಧಿಕಾರಿಗಳಿoದ ಸಾಧ್ಯವಾಗಿಲ್ಲ. `ಕಾನೂನಿನ ಪ್ರಕಾರ ಕೆಲಸ ಮಾಡಿದ್ದೇವೆ’ ಎನ್ನುತ್ತಿದ್ದ ಅಧಿಕಾರಿಗಳ ವಿರುದ್ಧ ಶ್ರೀರಾಮ ಸೇನೆಯವರು ಕಿಡಿಕಾರಿದರು.
`ಧಾರವಾಡ ಮೂಲದ ಮುಕಳೆಪ್ಪ ಮುಂಡಗೋಡಿನ ವಿಳಾಸ ನೀಡಿದ್ದಾರೆ. ವಿವಾಹ ನೋಂದಣಿ ದಿನವೇ ಅವರು ಮುಂಡಗೋಡಿನಲ್ಲಿ ಬಾಡಿಗೆ ಮನೆ ಹೊಂದಿದ ಕರಾರು ಪತ್ರ ಹಾಜರುಪಡಿಸಿ ಮದುವೆ ಆಗಿದ್ದಾರೆ. ಇದೇ ಊರಿನಲ್ಲಿ ಕನಿಷ್ಟ 6 ತಿಂಗಳ ನಿವಾಸಿ ಆಗಿದ್ದರೆ ಮಾತ್ರ ಕಾನೂನಿನ ಪ್ರಕಾರ ವಿವಾಹ ಮಾಡಿಸಲು ಸಾಧ್ಯವಿದ್ದು, ಅಧಿಕಾರಿಗಳು 30 ದಿನ ವಸತಿ ಇದ್ದರೆ ವಿವಾಹ ನೋಂದಣಿ ಮಾಡಬಹುದು ಎನ್ನುತ್ತಿದ್ದಾರೆ. ಆದರೆ, ಮುಕಳೆಪ್ಪ ಒಂದು ದಿನ ಸಹ ಇಲ್ಲಿ ಇಲ್ಲದಿದ್ದರೂ ಅಧಿಕಾರಿಗಳು ಅವರ ಮದುವೆ ಮಾಡಿಸಿ ತಪ್ಪು ಮಾಡಿದ್ದಾರೆ’ ಎಂದು ಶ್ರೀರಾಮ ಸೇನೆಯ ಬಸವರಾಜ್ ಅವರು ದೂರಿದರು. `ನೋಂದಣಾಧಿಕಾರಿಗಳು ಯಾವುದೇ ದಾಖಲೆ ಪರಿಶೀಲನೆ ಮಾಡದೇ ಮದುವೆ ಮಾಡಿದ್ದಾರೆ. ಅಧಿಕಾರಿಗಳು ಹಣಪಡೆದು ಈ ನೋಂದಣಿ ಮಾಡಿದ್ದು, ಅವರ ವಿರುದ್ಧ ದೂರು ನೀಡಲಾಗುತ್ತದೆ’ ಎಂದು ವಿವರಿಸಿದರು.
Discussion about this post