ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈ ದುರಂತದಲ್ಲಿ ಮಗುವೊಂದು ಸಾವನಪ್ಪಿದೆ. ಬೆಂಗಳೂರಿನ ಬಿದರಳ್ಳಿಯ ಕೃತಿಕ್ (8) ಸಾವನಪ್ಪಿದ ಮಗು.
ಬೆಂಗಳೂರಿನ ಬಿದರಳ್ಳಿಯ ಕೆ ರವಿ ರೆಡ್ಡಿ ಅವರು ಸೆ 21ರ ಭಾನುವಾರ ಕುಟುಂಬದ ಜೊತೆ ಉತ್ತರ ಕನ್ನಡಕ್ಕೆ ಬಂದಿದ್ದರು. ಮುರುಡೇಶ್ವರ ಪ್ರವಾಸದಲ್ಲಿದ್ದ ಅವರು ರಾತ್ರಿ ಅಲ್ಲಿಯೇ ತಂಗಿದ್ದರು. ಸೋಮವಾರ ಬೆಳಗ್ಗೆ ಕುಟುಂಬದವರೆಲ್ಲ ಸೇರಿ ದೇವರ ದರ್ಶನ ಮಾಡಿದ್ದರು. ಅದಾದ ನಂತರ ದೇಗುಲದ ಎಡಭಾಗದ ಕಡಲತೀರಕ್ಕೆ ಆಡಲು ಹೋಗಿದ್ದರು.
ಎಲ್ಲರೂ ಸೇರಿ ಮರಳಿನಲ್ಲಿ ಆಟವಾಡುತ್ತಿದ್ದು, ಜೊತೆಗೆ ಸಮುದ್ರದ ನೀರಿಗೆ ಇಳಿದರು. ಕ್ರಮೇಣ ಕೃತಿಕ್ ಅವರು ಮರಳಿನಲ್ಲಿ ಆಡುತ್ತಲೇ ಮುಂದೆ ಸಾಗಿದ್ದು, ಏಕಾಏಕಿ ಅಲೆಯೊಂದು ಬಂದಿತು. ಆ ಅಲೆಗೆ ಕೃತಿಕ್ ಅವರು ಕೊಚ್ಚಿ ಹೋದರು. ಅವರ ಜೊತೆ ವಸಂತಾ ಕೆ ಎಂಬಾತರು ನೀರಿನಲ್ಲಿ ಕೊಚ್ಚಿ ಹೋದರು. ವಸಂತಾ ಅವರನ್ನು ಅಲ್ಲಿದ್ದ ಇನ್ನಿತರರು ರಕ್ಷಿಸಿದರು. ಆದರೆ, ಕೃತಿಕ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಸದ್ಯ ವಸಂತಾ ಕೆ ಅವರನ್ನು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಮುರುಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Discussion about this post