ಕುಮಟಾದ ಹುಬ್ಬಣಗೇರಿ ಬಳಿ ಶಾಲೆ ಹಾಗೂ ಅಂಗನವಾಡಿಯಿರುವ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪಿಸಿದ ಬಗ್ಗೆ ದೂರು ಸ್ವೀಕರಿಸಿದ ಮಾನವ ಹಕ್ಕು ಆಯೋಗ ಈ ಬಗ್ಗೆ ತುರ್ತು ಕ್ರಮಕ್ಕೆ ಆದೇಶಿಸಿದೆ. ಡಿಸೆಂಬರ್ 1ರ ಒಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಆಯೋಗ ಸೂಚಿಸಿದೆ.
ಕುಮಟಾದ ಹುಬ್ಬಣಗೇರಿ ಬಳಿ ಜನರ ವಿರೋಧದ ನಡುವೆಯೂ ಬಾಡ ಗ್ರಾಮ ಪಂಚಾಯತದವರು ತ್ಯಾಜ್ಯ ಘಟಕ ಸ್ಥಾಪಿಸಿದ್ದರು. ಆ ಘಟಕ ವೈಜ್ಞಾನಿಕ ನಿರ್ವಹಣೆ ಆಗದ ಕಾರಣ ಅಲ್ಲಿನ ಶಾಲೆ ಹಾಗೂ ಅಂಗನವಾಡಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಅಲ್ಲಿನವರು ಗ್ರಾಮ ಪಂಚಾಯತ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಆಗಿರಲಿಲ್ಲ. ಬೇಡಿಕೆಯ ಪ್ರಕಾರ ತ್ಯಾಜ್ಯ ಘಟಕದ ಸ್ಥಳಾಂತರವೂ ನಡೆದಿರಲಿಲ್ಲ.
ಈ ಎಲ್ಲಾ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಸೇರಿ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಮಕ್ಕಳಿಗೆ ಆಗುವ ಸಮಸ್ಯೆಯನ್ನು ಬಗೆಹರಿಸುವಂತೆ ಅವರು ಕೋರಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಆಯೋಗ ಜಿಲ್ಲಾ ಪಂಚಾಯತಗೆ ನಿರ್ದೇಶನ ನೀಡಿದೆ. ಕಸದ ತೊಟ್ಟಿ ಸ್ವಚ್ಚ ಮಾಡಿ ವರದಿ ಸಲ್ಲಿಸುವಂತೆ ಮಾನವ ಹಕ್ಕು ಆಯೋಗ ಆದೇಶಿಸಿದೆ.
ಡಿಸೆಂಬರ್ 2ರಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಅಷ್ಟರ ಒಳಗೆ ಕೈಗೊಂಡ ಕ್ರಮದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಆಯೊಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದೆ.
Discussion about this post