ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಪ್ರಮಾಣ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೃಷಿ ಭೂಮಿ ನಡುವಿನ ಪ್ರದೇಶದಲ್ಲಿ ಗಾಂಜಾ ಬೆಳೆಯುವ ಸಾಧ್ಯತೆಗಳಿರುವ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅನುಮಾನವ್ಯಕ್ತಪಡಿಸಿದ್ದು, ಅಂಥವುಗಳನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಅವರು ಸೂಚಿಸಿದ್ದಾರೆ.
`ಎಲ್ಲಾ ಇಲಾಖೆ ಅಧಿಕಾರಿ-ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಕೃಷಿ ಭೂಮಿ ನಡುವಿನ ಪ್ರದೇಶದಲ್ಲಿ ಗಾಂಜಾ ಬೆಳೆಯುವುದು ಗೊತ್ತಾದರೆ ಕೂಡಲೇ ಮಾಹಿತಿ ಕೊಡಬೇಕು’ ಎಂದವರು ಹೇಳಿದ್ದಾರೆ. `ಸದ್ಯ ಕಬ್ಬು ಕಟಾವು ಶುರುವಾಗಲಿದ್ದು, ಈ ಪ್ರದೇಶದಲ್ಲಿಯೂ ತಪ್ಪದೇ ಶೋಧ ನಡೆಸಬೇಕು’ ಎಂದವರು ನಿರ್ದೇಶನ ನೀಡಿದ್ದಾರೆ.
`ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆ ಕಂಡು ಬಂದಲ್ಲಿ ಬೀಟ್ ವ್ಯವಸ್ಥೆಯಲ್ಲಿರುವ ಸಿಬ್ಬಂದಿ ಪೊಲೀಸರಿಗೆ ತಿಳಿಸಬೇಕು. ಅರಣ್ಯ ವೀಕ್ಷಕರಿಗೆ ಮಾದಕ ವಸ್ತುಗಳ ತಡೆಗಟ್ಟುವ ಹಾಗೂ ಗಾಂಜಾ ಗಿಡದ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕು’ ಎಂದವರು ಹೇಳಿದ್ದಾರೆ. `ರೆಸಾರ್ಟ ಹಾಗೂ ಹೋಂ ಸ್ಟೇ ಮಾಲಕರು ಸಹ ಮಾದಕ ವ್ಯಸನದ ವಿರುದ್ಧ ಎಚ್ಚರಿಕೆವಹಿಸಬೇಕು. ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತು ನಿಷೇಧದ ಬಗ್ಗೆ ಅರಿವು ಮೂಡಿಸುವುದರ ಜೊತೆ ಹೊಟೇಲ್ ಹಾಗೂ ಹೋಂ ಸ್ಟೇಗಳಲ್ಲಿ ಕಡಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು’ ಎಂದು ಸೂಚಿಸಿದರು.
`ಉತ್ತರ ಕನ್ನಡ ಜಿಲ್ಲೆಗೆ ಹೊರಭಾಗದಿಂದ ಮಾದಕ ವಸ್ತು ಸರಬರಾಜಾಗುತ್ತಿದೆ. ಕೆಲ ಸ್ಥಳೀಯರು ಇದರಲ್ಲಿ ಭಾಗಿಯಾಗಿದ್ದು, ಅಂಥವರನ್ನು ಹುಡುಕಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. `2025ರ ಜನವರಿಯಿಂದ ಈವರೆಗೆ ಮಾದಕ ವಸ್ತುಗಳ ಸೇವನೆ ಕುರಿತಂತೆ 126 ಪ್ರಕರಣ ದಾಖಲಿಸಿ 154 ಮಂದಿಯನ್ನು ಬಂಧಿಸಲಾಗಿದೆ’ ಎಂದವರು ತಿಳಿಸಿದರು.
Discussion about this post