ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಧಕ್ಕೆಯಾಗಿರುವ ಬಗ್ಗೆ ಶಿರಸಿ ಪಶ್ಚಿಮ ಭಾಗ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದವರು ಸರ್ಕಾರದ ಗಮನಸೆಳೆದಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯದ ಬಗ್ಗೆ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತಗೆ ಜನಪ್ರತಿನಿಧಿಗಳಿಲ್ಲ. ಚುನಾವಣೆ ನಡೆಸಬೇಕಾದ ಅನಿವಾರ್ಯತೆಯಿದ್ದರೂ ಚುನಾವಣೆ ನಡೆಸಲಾಗಿಲ್ಲ. ಇದರಿಂದ ಗ್ರಾಮ ಪಂಚಾಯತದ ಕೆಲಸಗಳು ಸಹ ಸರಿಯಾಗಿ ಸಾಗುತ್ತಿಲ್ಲ. ಸರ್ಕಾರದ ಈ ನಿರ್ಲಕ್ಷö್ಯ ಅಧಿಕಾರ ವಿಕೇಂದ್ರೀಕರಣದ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ನವೀನ್ ಶೆಟ್ಟಿ ವಿವರಿಸಿದರು.
`ಗ್ರಾಮ ಪಂಚಾಯಿತದವರು ಸಿದ್ಧಪಡಿಸಿದ ಅಭಿವೃದ್ಧಿ ಕ್ರಿಯಾಯೋಜನೆಗಳು ಕಸದ ಬುಟ್ಟಿ ಸೇರುತ್ತಿವೆ. ಜನರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. 15ನೇ ಹಣಕಾಸು ಆಯೋಗದ ನೆರವು ತಡೆ ಹಿಡಿದಿದ್ದರಿಂದ ಜನರಿಗೆ ಅನ್ಯಾಯವಾಗಿದೆ’ ಎಂದವರು ದೂರಿದರು. `ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ಶಾಲೆ-ಆರೋಗ್ಯ ಕೇಂದ್ರಗಳ ಸೌಲಭ್ಯ ಸೇರಿ ಅನೇಕ ಕಾಮಗಾರಿಗಳನ್ನು ನಡೆಸಲು ಸರ್ಕಾರದ ವಿಳಂಬ ನೀತಿ ತಡೆ ಒಡ್ಡುತ್ತಿದೆ’ ಎಂದವರು ಆಕ್ರೋಶವ್ಯಕ್ತಪಡಿಸಿದರು.
`ಸರ್ಕಾರ ಕೂಡಲೇ ಚುನಾವಣೆ ಘೋಷಿಸಬೇಕು. ಇಲ್ಲವಾದಲ್ಲಿ ಜನರ ಹಕ್ಕು, ಅಭಿವೃದ್ಧಿಯ ಹಕ್ಕು, ಪ್ರಜಾಪ್ರಭುತ್ವದ ಹಕ್ಕಿಗಾಗಿ ಹೋರಾಟ ಅನಿವಾರ್ಯ’ ಎಂದು ಒಕ್ಕೂಟದ ಪದಾಧಿಕಾರಿಗಳಾದ ರವೀಶ್ ಹೆಗಡೆ ಯಡಳ್ಳಿ, ನಾರಾಯಣ ಹೆಗಡೆ ದೇವನಹಳ್ಳಿ, ಗಜಾನನ ನಾಯ್ಕ ಸೋಂದಾ, ನಾರಾಯಣ ಹೆಗಡೆ ಸದಾಶಿವಳ್ಳಿ, ಪ್ರಕಾಶ್ ಹೆಗಡೆ ಬೈರುಂಬೆ, ಶ್ರೀಕಲ ನಾಯ್ಕ ಇಟ್ಗುಳಿ, ದತ್ತಾತ್ರೇಯ ಮಡಿವಾಳ ಕಾನಗೋಡ ಇತರರು ಎಚ್ಚರಿಸಿದರು.
Discussion about this post