ಸರ್ಕಾರದ ಸೂಚನೆಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಜಾತಿ ಗಣತಿ ಶುರುವಾಗಿದೆ. ಆದರೆ, ಗಣತಿಗಾಗಿ ಮನೆ ಮನೆ ಬಾಗಿಲಿಗೆ ಹೋದ ಶಿಕ್ಷಕರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಗಣತಿ ವೇಳೆ ಶಿಕ್ಷಕರು ಕೇಳುವ 60 ಪ್ರಶ್ನೆಗೆ ಉತ್ತರಿಸುವ ಬದಲು ಅನೇಕರು ಶಿಕ್ಷಕರಿಗೆ `ಅದು ಏಕೆ?’ ಎಂದು ಮರುಪ್ರಶ್ನೆ ಹಾಕುತ್ತಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಶಿಕ್ಷಕರು ಹೈರಣಾಗಿದ್ದಾರೆ!
ಜಾತಿ ಗಣತಿ ವಿಷಯವಾಗಿ ನೂರಾರು ಗೊಂದಲಗಳಿದ್ದು, ತಾಂತ್ರಿಕ ಸಮಸ್ಯೆಗಳು ಸಹ ಶಿಕ್ಷಕರ ಈ ಕಾರ್ಯಕ್ಕೆ ಅಡ್ಡಿಯಾಗಿದೆ. ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿಯೂ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. `ಆ ಪ್ರಶ್ನೆಗಳಿಗೆ ಪ್ರತಿಯೊಬ್ಬರು ಉತ್ತರಿಸಲೇ ಬೇಕು’ ಎಂದು ಸಹ ಸರ್ಕಾರ ಕಡ್ಡಾಯ ಮಾಡಿಲ್ಲ. ಹೀಗಾಗಿ `ಆ ವಿಷಯವನ್ನು ನಾ ಯಾಕೆ ಹೇಳಬೇಕು?’ ಎಂದು ಉದ್ದಟತನದಿಂದ ಪ್ರಶ್ನಿಸುವವರನ್ನು ಶಿಕ್ಷಕರಿಂದ ಸಮಾಧಾನ ಮಾಡಲಾಗುತ್ತಿಲ್ಲ. ಈ ಜಿಲ್ಲೆಯಲ್ಲಿ ಸಮೀಕ್ಷೆಗೆ 4.31 ಲಕ್ಷ ಮನೆ ಗುರುತಿಸಲಾಗಿದ್ದು, ಬುಧವಾರ ಸಂಜೆ 6ಗಂಟೆಯವರೆಗೆ ಜಿಲ್ಲೆಯಲ್ಲಿ 4209 ಮನೆಗಳ ಸಮೀಕ್ಷೆ ಮಾತ್ರ ಮುಗಿದಿದೆ.
ಸಮೀಕ್ಷೆದಾರರ ಮೊಬೈಲ್ ಸಂಖ್ಯೆ ಜೋಡಣೆಯಾದ ಅಪ್ಲಿಕೇಶನಿನಲ್ಲಿಯೂ ಅನೇಕ ದೋಷಗಳಿವೆ. ನಮೂದಾದ ಯುಎಚ್‌ಐಡಿ ಸಂಖ್ಯೆಗಳಿಗೆ ಹಾಗೂ ಅವರಿಗೆ ಗುರುತಿಸಿದ ಪ್ರದೇಶದಲ್ಲಿನ ಮನೆಗಳ ಸಂಖ್ಯೆಗಳ ನಡುವೆ ಸಾಮ್ಯತೆ ಇಲ್ಲ. ಒಂದು ಮನೆಯಿಂದ ಇನ್ನೊಂದು ಮನೆ ದೂರವಿರುವ ಸ್ಥಳದಲ್ಲಿ ದಿನಕ್ಕೆ 4-5 ಮನೆಗಳ ಸಮೀಕ್ಷೆ ಕಾರ್ಯ ಸಹ ಒಬ್ಬರಿಂದ ಸಾಧ್ಯವಾಗುತ್ತಿಲ್ಲ. ಇನ್ನೂ ಸಮೀಕ್ಷೆ ಅವಧಿಯಲ್ಲಿ ಕುಟುಂಬ ಸದಸ್ಯರು ಮನೆಯಲ್ಲಿಲ್ಲದ ಕಾರಣ ಅವರು ಬರುವವರೆಗೂ ಶಿಕ್ಷಕರು ಕಾಯುತ್ತಿದ್ದಾರೆ. ಅವರು ಬಂದ ನಂತರವೂ ಅನುಮಾನಾಸ್ಪದ ರೀತಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದು, ಪ್ರತಿ ಮನೆಯಲ್ಲಿಯೂ ಮತ್ತೆರಡು ತಾಸು ಕಾಲಹರಣವಾಗುತ್ತಿದೆ. ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಓಟಿಪಿಪಡೆಯಲು ಮೊಬೈಲ್ ನೆಟ್‌ವರ್ಕ ಸರಿಯಾಗಿ ಬರುತ್ತಿಲ್ಲ. ಹೀಗಿರುವಾಗ ಸಮೀಕ್ಷೆಯ ಪ್ರಶ್ನೆಯಲ್ಲಿ `ನಿಮಗೆ ವೈಪೈ ಇದೆಯೇ?’ ಎಂದಿದ್ದು, ಗಣತಿಗೆ ಬಂದವರು ಆ ಬಗ್ಗೆ ಪ್ರಶ್ನಿಸಿದಾಗ ಜನ ಸರ್ಕಾರಿ ವ್ಯವಸ್ಥೆಯ ಬಗ್ಗೆ ಕಿಡಿಕಾರುತ್ತಿದ್ದಾರೆ.
ಸಮೀಕ್ಷೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕಿಯರು ಇದ್ದಾರೆ. ಅವರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ಸಮೀಕ್ಷೆ ಮಾಡಲು ಸಮಸ್ಯೆ ಅನುಭವಿಸುತ್ತಿದ್ದಾರೆ. ತಾಂತ್ರಿಕ ಕಾರಣದಿಂದ ಸಮೀಕ್ಷೆಯ ವರದಿ ಮೊಬೈಲಿನಲ್ಲಿ ಅಪ್ಲೋಡ್ ಸಹ ಆಗುತ್ತಿಲ್ಲ. ಮೊಬೈಲ್ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದ ಶಿಕ್ಷಕರನ್ನು ಸಹ ಸಮೀಕ್ಷೆಗೆ ನೇಮಿಸಲಾಗಿದ್ದು, ಅಂಥವರು ತಲೆಕೆಟ್ಟು ಕೂತಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಶಿಕ್ಷಕರು ಸಹ ಕೆಮ್ಮುತ್ತ ಮನೆ ಮನೆ ಭೇಟಿಯ ಪ್ರಯತ್ನ ನಡೆಸಿದ್ದಾರೆ.
Discussion about this post