ಉತ್ತರ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಯಾಣದಲ್ಲಿ `ಗೂಗಲ್ ಮಾತು ನಂಬಬೇಡಿ’ ಎಂಬ ನಾಮಫಲಕ ಅಳವಡಿಸಲಾಗಿದೆ. ಗೂಗಲ್ ನಕ್ಷೆ ನೋಡಿ ಯಾಣಕ್ಕೆ ಬರುವವರು ಪದೇ ಪದೇ ದಾರಿ ತಪ್ಪುತ್ತಿದ್ದು, ಪ್ರಯಾಣಿಕರಿಗೆ ದಾರಿ ತೋರಿಸುವುದಕ್ಕಾಗಿ ಊರಿನವರು ಈ ಬಗೆಯ ಎಚ್ಚರಿಕಾ ಫಲಕ ಅಳವಡಿಸಿದ್ದಾರೆ!
ಶಿವ ಸನ್ನಿಧಿ ಯಾಣದ ದರ್ಶನಕ್ಕೆ ಪ್ರಪಂಚದ ನಾನಾ ಭಾಗಗಳಿಂದ ಜನ ಬರುತ್ತಾರೆ. ಅತ್ಯದ್ಬುತ ಕಲ್ಲಿನ ರಚನೆಯನ್ನು ಹೊಂದಿರುವ ಬೈರವೇಶ್ವರ ಶಿಖರ ಹಾಗೂ ಮೋಹಿನಿ ಶಿಖರ ನೋಡುವುದಕ್ಕಾಗಿಯೇ ಅನೇಕರು ಬರುತ್ತಾರೆ. ನಿತ್ಯ ನೂರಾರು ಜನ ಈ ಪ್ರದೇಶಕ್ಕೆ ಬರುತ್ತಿದ್ದು, ಸಮೀಪದ ವಿಭೂತಿ ಜಲಪಾತದ ಸೊಬಗನ್ನು ಸಹ ಸವಿಯುತ್ತಾರೆ. ಆದರೆ, ಅನೇಕರು ಮೊಬೈಲಿನಲ್ಲಿ ಗೂಗಲ್ ನಕ್ಷೆ ನೋಡಿ ಯಾಣಕ್ಕೆ ಬರುತ್ತಿದ್ದು ಅವರೆಲ್ಲರೂ ದಾರಿ ತಪ್ಪುತ್ತಿದ್ದಾರೆ.
ಯಾಣದಿಂದ ಸುಮಾರು 5ಕಿಮೀ ಮೊದಲು ಕಾಣುವ ಇನ್ನೊಂದು ರಸ್ತೆ ಮೂಲಕ ಪ್ರವಾಸಿಗರು ಸಂಚರಿಸಿ, ಕಾಡು-ಮೇಡು ಅಲೆದು ಕೊನೆಗೆ ಸ್ಥಳೀಯರ ಮಾರ್ಗದರ್ಶನಪಡೆದು ಯಾಣ ಸೇರುತ್ತಿದ್ದಾರೆ. ಯಾಣ ಪ್ರವಾಸಿಗರು ಪದೇ ಪದೇ ದಾರಿ ತಪ್ಪುವುದನ್ನು ಅರಿತ ಆನೆಗುಂದಿಯ ಮಹಾಸತಿ ಗೆಳೆಯರ ಬಳಗದವರು ಇದಕ್ಕೆ ಗೂಗಲ್ ಕಾರಣ ಎಂದು ಕಂಡುಕೊAಡಿದ್ದಾರೆ. ಹೀಗಾಗಿ `ಗೂಗಲ್ ಮಾತು ನಂಬಬೇಡಿ. ನಮ್ಮ ಮಾತು ನಂಬಿ’ ಎಂಬ ಬರಹಗಳ ಜೊತೆ ಯಾಣಕ್ಕೆ ಬರುವ ದಾರಿ ತೋರಿಸಿದ್ದಾರೆ. ಹೀಗಾಗಿ ಯಾಣ ಪ್ರವಾಸಿಗರು ಸದ್ಯ ನೇರವಾಗಿ ಶ್ರೀಕ್ಷೇತ್ರಕ್ಕೆ ಬರುತ್ತಿದ್ದು, ಈ ನಾಮಫಲಕ ಅಳವಡಿಸಿ ವರ್ಷ ಕಳೆದರೂ ಗೂಗಲ್ ಮಾತ್ರ ಸರಿ ದಾರಿ ತೋರಿಸುವುದನ್ನು ಕಲಿತಿಲ್ಲ!
ಬ್ಯಾನರ್ ಮಾಡಿಕೊಟ್ಟವರಿಗೆ ನಿತ್ಯವೂ ತಲೆಬಿಸಿ!
ಊರಿನವರ ಕೋರಿಕೆ ಮೇರೆಗೆ ದೇವರ ಸೇವೆ ಎಂದು ಕುಮಟಾದ ಓಂ ಪ್ಲೆಕ್ಸಿನವರು ಈ ನಾಮಫಲಕ ಮಾಡಿಕೊಟ್ಟಿದ್ದಾರೆ. ಅನೇಕ ಪ್ರವಾಸಿಗರು ನಾಮಫಲಕ ಅಡಿಭಾಗವಿರುವ ಫೋನ್ ನಂ ಸೇವ್ ಮಾಡಿಕೊಂಡಿದ್ದು, ಯಾಣದ ಬಗ್ಗೆ ಅವರಿಗೆ ವಿಚಾರಿಸುತ್ತಿದ್ದಾರೆ. ಬ್ಯಾನರ್ ಮಾಡಿಕೊಟ್ಟಿದ್ದು ಮಾತ್ರ ಓಂ ಪ್ಲೇಕ್ಸಿನವರಾಗಿದ್ದು, ಯಾಣದ ಆಡಳಿತ ಮಂಡಳಿಗೆ ಹಾಗೂ ಅವರಿಗೆ ಯಾವುದೇ ಸಂಬoದ ಇಲ್ಲ. ಅದಾಗಿಯೂ, `ಯಾಣಕ್ಕೆ ಪ್ರವೇಶ ಇದೆಯಾ? ಅಲ್ಲಿ ಊಟ ಸಿಗುತ್ತದಾ? ಪೂಜೆ ಎಷ್ಟು ಗಂಟೆಗೆ? ಹೋಗುವ ದಾರಿ ಸರಿಯಾಗಿದೆಯಾ?’ ಎಂಬುದನ್ನು ಸೇರಿ ಅನೇಕ ಬಗೆಯ ಫೋನುಗಳಿಗೆ ಓಂ ಪ್ಲೆಕ್ಸ್ ಸಿಬ್ಬಂದಿಗೆ ಫೋನ್ ಬರುತ್ತಿದೆ!
Discussion about this post