ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಕಟ್ಟಡಗಳಿವೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿದ ನೂರಾರು ಕಟ್ಟಡಗಳಿದ್ದರೂ ಕಾನೂನು ಕ್ರಮ ಮಾತ್ರ ಸರಿಯಾಗಿ ಆಗುತ್ತಿಲ್ಲ. ಈ ಊರಿನಲ್ಲಿ ಸರ್ಕಾರಿ ಕಟ್ಟಡಗಳು ಸಹ ನಿಯಮಕ್ಕೆ ಸರಿಯಾಗಿ ನಿರ್ಮಾಣವಾಗುತ್ತಿಲ್ಲ!
ಕಾರವಾರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲೆಂದರಲ್ಲಿ ಅಪಾರ್ಟಮೆಂಟುಗಳು ತಲೆಯೆತ್ತುತ್ತಿವೆ. ಗುಂಟೆ ಲೆಕ್ಕದ ಜಾಗಕ್ಕೂ ಕೋಟಿ ರೂ ಲೆಕ್ಕಾಚಾರ ನಡೆಯುತ್ತಿದೆ. ಅಕ್ರಮ-ಅನಧಿಕೃತ-ಅವ್ಯವಹಾರಗಳಿಗೆ ಇಲ್ಲಿ ಲೆಕ್ಕವೇ ಇಲ್ಲ ಎನ್ನುವಂತಾಗಿದೆ. ರಸ್ತೆ, ಚರಂಡಿ ಸೇರಿ ಸಾರ್ವಜನಿಕ ಪ್ರದೇಶಗಳ ಅತಿಕ್ರಮಣ ನಡೆಸಿ ಕಟ್ಟಡ ನಿರ್ಮಾಣ ಕಾರ್ಯ ಸಹ ನಡೆದಿದೆ. ಒಂದೆರಡು ಬಾರಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿದ್ದು ಬಿಟ್ಟರೆ ಅದು ನಂತರ ಮುಂದುವರೆದಿಲ್ಲ. ಪ್ರಭಾವಿಗಳ ಅಧೀನದಲ್ಲಿರುವ ಕಟ್ಟಡಗಳನ್ನು ಯಾರೂ ಮುಟ್ಟಿಲ್ಲ!
ಅಕ್ರಮ ಕಟ್ಟಡಗಳ ಪರಿಣಾಮ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಕನಿಷ್ಟ ಮೂಲಭೂತ ಸೌಕರ್ಯಗಳಿಗೂ ದಕ್ಕೆ ಆಗುತ್ತಿದೆ. ಅದಾಗಿಯೂ ಆ ಬಗ್ಗೆ ಹೇಳುವವರಿಲ್ಲ. ಹೇಳಿದರೂ ಅವರ ಮಾತು ಕೇಳುವವರಿಲ್ಲ. ಸದ್ಯ ಕಾರವಾರ ಹೃದಯಭಾಗವಾದ ಬಸ್ ನಿಲ್ದಾಣ ಕಟ್ಟಡದಲ್ಲಿಯೂ ಅನೇಕ ನ್ಯೂನ್ಯತೆಗಳಿರುವುದು ಕಂಡು ಬಂದಿದೆ. ಪ್ರಯಾಣಿಕರ ಅನುಕೂಲತೆಗಾಗಿ ಕನಿಷ್ಠ ಸೌಕರ್ಯ ಒದಗಿಸಬೇಕಾದ ಪ್ರದೇಶಗಳು ವಾಣಿಜ್ಯ ಮಳಿಗೆಗಳಾಗಿ ಪರಿವರ್ತನೆಯಾಗಿದೆ. ಅನುಮೋದಿತ ನೀಲನಕ್ಷೆಯ ಪ್ರಕಾರ ಕಟ್ಟಡ ರಚನೆ ಆಗಿಲ್ಲ. ಈ ಬಗ್ಗೆ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಸಂಜಯ ಶಾನಭಾಗ ಧ್ವನಿ ಎತ್ತಿದರೂ ನ್ಯೂನ್ಯತೆ ಸರಿಪಡಿಸುವ ಕೆಲಸ ನಡೆದಿಲ್ಲ.
ದಶಕದ ಹಿಂದೆ ಕಾರವಾರಕ್ಕೆ ಹೊಸ ಬಸ್ ನಿಲ್ದಾಣ ಮಂಜೂರಿಯಾಗಿದ್ದು, ನಕ್ಷೆಯ ಪ್ರಕಾರ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಟ್ಟಡ ಕಟ್ಟುವಾಗ ಕೆಲ ಬದಲಾವಣೆಗಳು ನಡೆದವು. ಕ್ರಮೇಣ ಅಲ್ಲಿ ಪ್ರಯಾಣಿಕರಿಗೆ ಒದಗಿಸಬೇಕಾದ ಸೌಕರ್ಯಗಳು ಮರಿಚಿಕೆಯಾದವು. ಪ್ರಯಾಣಿಕರ ಅನುಕೂಲಕ್ಕಾಗಿ ಸಿಗಬೇಕಾದ ಸೌಕರ್ಯಗಳನ್ನು ಅಲ್ಲಿ ಕಲ್ಪಿಸಲಾಗಲಿಲ್ಲ.
ಬಸ್ ನಿಲ್ದಾಣದ ಪ್ರವೇಶ ದ್ವಾರದ ದಿಕ್ಕು ಬದಲಾಯಿತು. ಇದಕ್ಕಾಗಿ ಕೆಲ ಜಾಗದ ಒತ್ತುವರಿಯೂ ನಡೆಯಿತು. ವಿಶ್ರಾಂತಿ ಕೊಠಡಿ, ಮಹಿಳಾ ಪ್ರಯಾಣಿಕರ ಕೊಠಡಿ, ಪ್ರವೇಶ ದ್ವಾರ, ಶೌಚಾಲಯ ಸೇರಿ ಅನೇಕ ಕಡೆ ನಕ್ಷೆಗೆ ವಿರುದ್ಧವಾಗಿ ಕೆಲಸ ಮಾಡಲಾಯಿತು. ಅದಕ್ಕಿಂತ ಮುಖ್ಯವಾಗಿ ಪ್ರಯಾಣಿಕರ ಅನುಕೂಲಕ್ಕೆ ಕಾಯ್ದಿರಿಸಲಾದ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಅದನ್ನು ಬಾಡಿಗೆಗೆ ಬಿಡಲಾಯಿತು!
ಈ ಬಗ್ಗೆ ಐದು ವರ್ಷಗಳ ಹಿಂದೆಯೇ ಸಂಜಯ ಶಾನಭಾಗ ಅವರು ಗಮನಸೆಳೆದರು. ಆದರೆ, ಈವರೆಗೂ ಪ್ರಯಾಣಿಕರಿಗೆ ಸಿಗಬೇಕಾದ ಸೌಕರ್ಯಗಳನ್ನು ನಿಗಮದವರು ಕಲ್ಪಿಸಿಲ್ಲ. ಸಾರ್ವಜನಿಕ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಜಯ ಶಾನಭಾಗ ಅವರು ತಮ್ಮ ಹೋರಾಟ ನಿಲ್ಲಿಸಲಿಲ್ಲ.
Discussion about this post