ಕಾರವಾರದ ಜಹಾಂಗಿರ್ ಅವರು ಮೊದಲ ಸಲ ಟ್ರೇಡಿಂಗ್ ಆಪ್ಲಿಕೇಶನ್’ಲಿ 10 ಸಾವಿರ ಹೂಡಿಕೆ ಮಾಡಿ 15 ಸಾವಿರ ಗೆದ್ದರು. ಎರಡನೇ ಬಾರಿ 25 ಸಾವಿರ ಹೂಡಿಕೆ ಮಾಡಿ 49 ಸಾವಿರ ರೂ ಲಾಭಗಳಿಸಿದರು. ಮೂರನೇ ಬಾರಿ ಒಟ್ಟು 23.95 ಲಕ್ಷ ರೂ ಹೂಡಿಕೆ ಮಾಡಿ ಮೋಸ ಹೋದರು!
ಕಾರವಾರದ ನಂದನಗದ್ದಾ ಸಣ್ಣಮಸೀದಿ ಬಳಿಯ ಜಹಾಂಗಿರ್ ಶೇಖ್ ಅವರು ವಾಸವಾಗಿದ್ದರು. 2025ರ ಜೂನ್ 17ರಂದು ಅವರಿಗೆ ಟೆಲಿಗ್ರಾಮ್ ಅಪ್ಲಿಕೇಶನಿನಲ್ಲಿ ಸುಲಭವಾಗಿ ಹಣ ಮಾಡುವ ಸೂಚನೆ ಸಿಕ್ಕಿತು. ಅದನ್ನು ಅವರು ಗಮನಿಸಿದಾಗ ಅಲ್ಲಿ ಟ್ರೇಡಿಂಗ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಆಪ್ಲಿಕೇಶನ್’ನ್ನು ಜಹಾಂಗಿರ್ ಶೇಖ್ ಅವರು ಡೌನ್‌ಲೋಡ್ ಮಾಡಿದರು.
ಆ ಅಪ್ಲಿಕೇಶನ್ ಸೂಚಿಸಿದ ರೀತಿ ಜಹಾಂಗಿರ್ ಶೇಖ್ ಅವರು ಅಲ್ಲಿ ಖಾತೆ ತೆರೆದರು. ಆಗ, ನಿಶಾ ಎಂಬ ಮಹಿಳೆ ಜಹಾಂಗಿರ್ ಅವರಿಗೆ ಪರಿಚಯವಾದರು. `ತಾನು ಹೇಳಿದ ಕಡೆ ಹಣ ಹೂಡಿದರೆ ಲಾಭ ಬರುತ್ತದೆ’ ಎಂದು ನಂಬಿಸಿ ಮಾರ್ಗದರ್ಶನ ಮಾಡಿದರು. ನಿಶಾ ಅವರು ಹೇಳಿದಂತೆ ಆ ಅಪ್ಲಿಕೇಶನ್ ಮೂಲಕ ಜಹಾಂಗಿರ್ ಶೇಖ್ ಅವರು ಮೊದಲ ಸಲ 10 ಸಾವಿರ ರೂ ಹೂಡಿಕೆ ಮಾಡಿದರು. ಒಂದೇ ದಿನದಲ್ಲಿ ಅವರಿಗೆ 15 ಸಾವಿರ ರೂ ಮರಳಿ ಸಿಕ್ಕಿತು.
ಇದರಿಂದ ಖುಷಿಯಾದ ಜಹಾಂಗಿರ್ ಶೇಖ್ ಅವರು ಮರು ದಿನ ಮತ್ತೆ 25 ಸಾವಿರ ರೂ ಹೂಡಿಕೆ ಮಾಡಿದರು. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಎಂದು ನಂಬಿಸಿದ ನಿಶಾ ಅವರು 49 ಸಾವಿರ ರೂ ಮರಳಿಸಿದರು. ಇದರಿಂದ ಜಹಾಂಗಿರ್ ಶೇಖ್ ಇನ್ನಷ್ಟು ಖುಷಿ ಅನುಭವಿಸಿದರು. ಮೂರನೇ ಬಾರಿ ಅವರು ತಮ್ಮ ಬಳಿಯಿದ್ದ ಎಲ್ಲಾ ದುಡ್ಡನ್ನು ಆ ಅಪ್ಲಿಕೇಶನ್ ಮೂಲಕ ಹೂಡಿಕೆ ಮಾಡುವ ಕೆಲಸ ಮಾಡಿದರು.
ಎಲ್ಲಾ ಕಡೆಯ ಹಣವನ್ನು ಒಟ್ಟುಗೂಡಿಸಿ ಒಟ್ಟು 23.95 ಲಕ್ಷ ರೂಪಾಯಿಗಳನ್ನು ನಿಶಾ ಅವರು ಹೇಳಿದ ಕಡೆ ವರ್ಗಾಯಿಸಿದರು. ಜೂನ್ 19ರಿಂದ 3ರವರವರೆಗೂ ಅವರು ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಈ ಹಣ ವರ್ಗಾಯಿಸಿದ್ದು, ಹಣಪಡೆದವರು ಈವರೆಗೂ ಕೈಗೆ ಸಿಕ್ಕಿಲ್ಲ. ಜಹಾಂಗಿರ್ ಶೇಖ್ ಅವರಿಗೆ 23,95,261ರೂ ಮೋಸವಾಗಿರುವುದನ್ನು ಅರಿತು ಅವರ ತಾಯಿ ಕುಲಸಂಬಿ ಶೇಖ್ ಪೊಲೀಸರ ಮೊರೆ ಹೋದರು.
ಕುಲಸಂಬಿ ಶೇಖ್ ಅವರ ಕಥೆ ಕೇಳಿದ ಕಾರವಾರದ ಸೈಬರ್ ಅಪರಾಧ ಠಾಣೆ ಪೊಲೀಸರು `ಅತಿಯಾದ ಆಮೀಷಕ್ಕೆ ಬಲಿಯಾಗಬೇಡಿ’ ಎಂದು ಬುದ್ದಿ ಹೇಳಿದರು. ಅವರ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿದರು. ಸದ್ಯ ಹಣ ವರ್ಗವಾದ ಬ್ಯಾಂಕ್ ಖಾತೆಗಳ ಶೋಧ ನಡೆಯುತ್ತಿದೆ.
Discussion about this post