ಕಾರವಾರ:
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಶನಿವಾರ ಕಾರವಾರದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.
ಮಾಲಾದೇವಿ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಿತು. ಇಡೀ ಮೈದಾನದ ಹೋರಾಟಗಾರರಿಂದ ತುಂಬಿ ಹೋಗಿತ್ತು. ಬಿಸಿಲು ಲೆಕ್ಕಿಸದೆ ಜನ ಮೈದಾನದಲ್ಲಿ ಸೇರಿದ್ದರು. ಅದರ ಜತೆಗೆ ಗುಂಪು ಗುಂಪಾಗಿ ಜನರ ಸಾಲು ಬಸ್ ನಿಲ್ದಾಣದ ಕಡೆಯಿಂದ ಮೈದಾನದ ಕಡೆ ಸಾಗುತ್ತಿತ್ತು. ಇನ್ನೊಂದೆಡೆ ಮಾಲಾದೇವಿ ಮೈದಾನದಲ್ಲಿ ಮಾಲಾದೇವಿ ದೇವಸ್ಥಾನದ ಜಾತ್ರೆ ನಡೆಯುತ್ತಿತ್ತು. ಅದರ ಪಕ್ಕದಲ್ಲಿಯೇ ಬಹಿರಂತ ವೇದಿಕೆಯಲ್ಲಿ ಅರಣ್ಯ ಭೂಮಿ ಹಕ್ಕಿಗಾಗಿ ಕೂಗು ಮೊಳಗಿತು. ಹಸಿರು ಶಾಲು ಧರಿಸಿದ ರೈತರು, ಮಹಿಳೆಯರು, ವೃದ್ಧರು, ವಯಸ್ಕರು ಎನ್ನದೆ ಎಲ್ಲ ವರ್ಗದ ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ರವೀಂದ್ರನಾಥ ಟ್ಯಾಗೋರ ಮಯೂರವರ್ಮ ವೇದಿಕೆ ಬಳಿ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು ಅಲ್ಲಿಂದ ಮಾಲಾದೇವಿ ಮೈದಾನದ ವರೆಗೆ ಮೆರವಣಿಗೆ ಹೊರಟರು. ಉದ್ದದ ಮೆರವಣಿಗೆ ಸಾಲಿಗೆ ರಸ್ತೆಗಳು ತುಂಬಿ ಹೋಗಿದ್ದವು. ಮಾಲಾದೇವಿ ಮೈದಾನದಲ್ಲಿ ಎಲ್ಲರೂ ಸಮಾವೇಶಗೊಂಡರು. ಐದು ಸಾವಿರಕ್ಕೂ ಅಧಿಕ ಜನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಜಿಲ್ಲೆ ಎಲ್ಲ ತಾಲೂಕುಗಳಿಂದ ಜನರು ವಾಹನ ಮಾಡಿಕೊಂಡು ಕಾರವಾರಕ್ಕೆ ಬಂದಿದ್ದರು. ನಗರದ ಬಿಲ್ಟ್ ವೃತ್ತದ ಪಕ್ಕದಲ್ಲಿ ಕಡಲತೀರದ ಖಾಲಿ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿತ್ತು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರ ನಿರ್ಣಯ ತೆಗೆದುಕೊಳ್ಳಬೇಕು ಇಲ್ಲವಾದರೆ ನಜಪ್ರತಿನಿಧಿಗಳ ಮನೆಯ ಮುಂದೆ ಧರಣಿ ಮಾಡುವುದಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಪ್ರತಿಭಟನಾ ನಿರತರ ಸಮಾವೇಶ ವೇದಿಕೆಗೆ ತೆರಳಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು.
