ದಾಂಡೇಲಿ :
ನಗರದ ರೋಟರಿ ಕ್ಲಬ್ ಮತ್ತು ಇನ್ನರ್ ವಿಲ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಡಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಂತೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ವಿಗ್ಯಾನ್ ರಥಂ ಪ್ರದರ್ಶನ ಕಾರ್ಯಕ್ರಮವನ್ನು ಶನಿವಾರ ಜನತಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಅವರು ವೈಜ್ಞಾನಿಕ ಜಾಗೃತಿ ಮೂಡಿಸುವುದು, ಆವಿಷ್ಕಾರಗಳನ್ನು ಉತ್ತೇಜಿಸುವುದು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಳೀಯರಿಗೆ ತಲುಪಿಸುವುದೇ ವಿಗ್ಯಾನ್ ರಥಂ ಇದರ ಪ್ರಮುಖ ಉದ್ದೇಶವಾಗಿದೆ ಎಂದರು. ತಮಿಳುನಾಡಿನ ಬಿರುದು ನಗರದ ರೋಟರಿ ಕ್ಲಬ್ ಆಶ್ರಯದಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ತಮಿಳುನಾಡಿನ ಬಿರುದುನಗರ ರೋಟರಿ ಕ್ಲಬ್ಬಿನ ನವೀನ್ ಅವರು ವಿಗ್ಯಾನ್ ರಥಂ ಎಂದರೆ “ವಿಜ್ಞಾನದ ರಥ”. ಇದು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ವಿನ್ಯಾಸಗೊಳಿಸಲಾದ ಸಂಚಾರಿ ವಿಜ್ಞಾನ ಪ್ರದರ್ಶನ ಅಥವಾ ವಾಹನವಾಗಿದೆ. ಇದು ವಿಜ್ಞಾನದ ಮಾದರಿಗಳು, ಪ್ರದರ್ಶನಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಹೊಂದಿರುವ ವಿಶೇಷ ವಾಹನವಾಗಿದೆ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಶಾಲೆಗಳು ಮತ್ತು ಸಮುದಾಯಗಳಿಗೆ ವಿಜ್ಞಾನವನ್ನು ತಲುಪಿಸುವುದು ಇದರ ಗುರಿಯಾಗಿದೆ. ಶಕ್ತಿ ಸಂರಕ್ಷಣೆ, ನವೀಕರಿಸಬಹುದಾದ ಶಕ್ತಿ, ಪರಿಸರ ಶಿಕ್ಷಣ, ಜೈವಿಕ ವೈವಿಧ್ಯತೆ ಮತ್ತು ವೈಜ್ಞಾನಿಕ ಮೂಡನಂಬಿಕೆಗಳ ನಿವಾರಣೆಯಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಗ್ಯಾನ್ ರಥಂ ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಜನತಾ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅಮೃತ್ ರಾಮರಥ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜಾಧವ, ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ, ರೋಟರಿ ಕ್ಲಬಿನ ಪ್ರಮುಖ ಎಸ್.ಜಿ.ಬಿರದಾರ, ಜನತಾ ವಿದ್ಯಾಲಯ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಎಂ.ಬಿ.ಅರವಳ್ಳಿ, ಇನ್ನರ್ ವಿಲ್ ಕ್ಲಬಿನ ಡಾ.ಜ್ಯೋತಿ ಪಾಟೀಲ್, ಡಾ.ಜಾಹೇರಾ ದಪೇದಾರ, ಡಾ.ಅನೂಷಾ ಮಾಡ್ದೋಳ್ಕರ್ ಮೊದಲಾದವರು ಭಾಗವಹಿಸಿದ್ದರು.
ನಂತರ ವಿದ್ಯಾರ್ಥಿಗಳಿಗೆ ಅತ್ಯಾಕರ್ಷಕ ಪ್ರಾಯೋಗಿಕ ವಿಜ್ಞಾನ ಪ್ರಯೋಗಗಳು ಅರ್ಥಪೂರ್ಣವಾಗಿ ಜರುಗಿತು.
