ದಾಂಡೇಲಿ :
ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ ಹಾಗೂ ತಂತ್ರಜ್ಞಾನದ ಯುಗವೆಂದೆ ಕರೆಯಲಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಜೊತೆಗೆ ಜ್ಞಾನದ ಅವಶ್ಯಕತೆಯು ಅತಿ ಅಗತ್ಯ. ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಹಂತದಲ್ಲಿ ವೈಜ್ಞಾನಿಕ ವಿಚಾರಧಾರೆಗಳು, ಅನ್ವೇಷಣೆಗಳು, ತಂತ್ರಜ್ಞಾನದ ಮಾಹಿತಿ ಮತ್ತು ಆಸಕ್ತಿಯನ್ನು ಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನದ ಅನಿವಾರ್ಯತೆ ಇದೆ ಎಂದು ದಾಂಡೇಲಿಯ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಅವರು ಹೇಳಿದರು.
ಅವರು ಬುಧವಾರ ನಗರದ ರೋಟರಿ ಶಿಕ್ಷಣ ಸಂಸ್ಥೆಯ ರೋಟರಿ ಶಾಲೆಯ ಸಭಾಭವನದಲ್ಲಿ ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕವಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಲಾದ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ರೋಟರಿ ಕ್ಲಬ್ಬಿನ ಖಜಾಂಚಿ ಲಿಯೋ ಪಿಂಟೋ ಅವರು ವಿಜ್ಞಾನ ವಸ್ತು ಪ್ರದರ್ಶನ ಯೋಜನೆಯು ಬಹುತೇಕ ಎಲ್ಲಾ ಪಠ್ಯಕ್ರಮಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಒಂದು ಯೋಜನೆಗೆ ಹೆಚ್ಚಿನ ಸಮಯ, ಶ್ರಮ ಮತ್ತು ಚಿಂತನೆಯನ್ನು ಹಾಕುತ್ತಾರೆ. ಅವರು ತಮ್ಮ ಚಿಂತನೆಯ ಫಲಿತಾಂಶವನ್ನು ಯೋಜನೆಯ ರೂಪದಲ್ಲಿ ನೋಡುತ್ತಾರೆ. ಅವರು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ ಅಥವಾ ಬಳಸಿಕೊಂಡಿದ್ದಾರೆ. ಯೋಜನೆಯನ್ನು ಸಿದ್ಧಪಡಿಸುವಾಗ ವಿದ್ಯಾರ್ಥಿಗಳು ಬಳಸುವ ಮತ್ತೊಂದು ಪ್ರಮುಖ ಕೌಶಲ್ಯವೆಂದರೆ ಸಂಘಟನೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಪೋಷಕರಿಂದ ಬೆಂಬಲ ಮತ್ತು ಸಲಹೆಯ ಅಗತ್ಯವಿರುತ್ತದೆ, ಆದರೆ ಇದು ಪ್ರಾರಂಭದಿಂದ ಅಂತ್ಯದವರೆಗೆ ಯೋಜನೆಯನ್ನು ಯೋಜಿಸಲು, ತಯಾರಿಸಲು ಮತ್ತು ಸಂಘಟಿಸಲು ಒಂದು ಅತ್ಯುತ್ತಮವಾದ ಅವಕಾಶವಾಗಿದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ ಅವರು ಮಾತನಾಡಿ ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ವಿಜ್ಞಾನ ವಸ್ತು ಪ್ರದರ್ಶನ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಜಿ.ಪತ್ತಾರ, ರೋಟರಿ ಶಾಲೆಯ ಶಿಕ್ಷಕ ವೃಂದದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸುಸ್ಥಿರ ಕೃಷಿ ಪದ್ಧತಿ, ಸ್ವಚ್ಛತೆ ಮತ್ತು ಆರೋಗ್ಯ, ಸಂಪನ್ಮೂಲ ನಿರ್ವಹಣೆ, ಕೈಗಾರಿಕಾ ಅಭಿವೃದ್ಧಿ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಪರಿಸರ ಸಂರಕ್ಷಣೆಯ ಜೊತೆಗೆ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂಬುದನ್ನು ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಕೌಶಲ್ಯದೊಂದಿಗೆ ಪ್ರದರ್ಶಿಸಿದರು.
