ಕುಮಟಾ:
ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ತಂದೆಯೇ ಮಗನಿಗೆ ಮಾನವೀಯತೆಯನ್ನು ಮೀರಿ ಹಿಂಸೆ ನೀಡಿದ ಹೃದಯ ಕಲಕುವ ಘಟನೆ ಬೆಳಕಿಗೆ ಬಂದಿದೆ.
ವಿಜಯ ನಾಯ್ಕ ಎನ್ನುವವರ ಮೇಲೆ ಮಗನನ್ನುಕೂಡಿ ಹಾಕಿದ ಆರೋಪ ಬಂದಿದೆ. ತನ್ನ ಮನೆಯ ಬಾತ್ರೂಮ್ನಲ್ಲಿ ಮಗನನ್ನು ಕೂಡಿಹಾಕಿ ಕಣ್ಣಿಗೆ ಕಾರದ ಪುಡಿ ಎರಚಿ, ಕೈಗಳನ್ನು ಸುಟ್ಟು ಚಿತ್ರಹಿಂಸೆ ನೀಡಿರುವ ವಿಚಾರ ಹೊರಬಿದ್ದಿದೆ.
13 ವರ್ಷಗಳ ಹಿಂದೆ ವಿಜಯ ನಾಯ್ಕ ಅವರು ಚಿತ್ರ ಎಂಬಾಕೆಯನ್ನು ವಿವಾಹವಾಗಿದ್ದರೂ ಇಬ್ಬರಿಗೂ ವಿಚ್ಛೇದನವಾಗಿತ್ತು. ನ್ಯಾಯಾಲಯ ಮಕ್ಕಳನ್ನು ಇಬ್ಬರೂ ನೋಡಿಕೊಳ್ಳುವಂತೆ ಆದೇಶ ನೀಡಿದ್ದರಿಂದ ಬಾಲಕ ತಂದೆಯ ಮನೆಯಲ್ಲಿ ವಾಸವಾಗಿದ್ದ. ವಿಚ್ಛೇದನದ ಬಳಿಕ ವಿಜಯ್ ಮತ್ತೊಬ್ಬ ಮಹಿಳೆಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಮಗ ತನ್ನ “ಮೋಜು-ಮಸ್ತಿ”ಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಪ್ರತಿದಿನ ಹಿಂಸೆ ನೀಡುತ್ತಿದ್ದಾನೆಂದು ಮೂಲಗಳು ತಿಳಿಸಿವೆ.
ತಂದೆ ವಿಜಯ್, ಮಗನನ್ನು ಮನೆಯ ಬಾತ್ ರೂಮ್ ಒಳಗೆ ಕೂಡಿಹಾಕಿ ಕೈಗಳನ್ನು ಸುಟ್ಟು, ಕಣ್ಣಿಗೆ ಕಾರದಪುಡಿ ಎರಚಿ ಅಮಾನುಷ ದೌರ್ಜನ್ಯ ನಡೆಸಿದ್ದಾನೆ. ಬಾಲಕನ ವಿಕೃತ ಸ್ಥಿತಿ ತಾಯಿಗೆ ತಿಳಿದ ನಂತರ, ಕುಮಟಾ ಪೊಲೀಸರ ಸಹಾಯದಿಂದ ಮಗುವನ್ನು ರಕ್ಷಿಸಲಾಗಿದೆ. ಬಾಲಕನನ್ನು ತಕ್ಷಣವೇ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಂದೆ ವಿಜಯ್ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಘಟನೆಯ ನಂತರ ವಿಜಯ ನಾಯ್ಕ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
