ದಾಂಡೇಲಿ :
ಡಿ.13 ರಿಂದ ಡಿ.15 ರವರೆಗೆ ನಗರದ ಹಳೆ ನಗರಸಭೆಯ ಮೈದಾನದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ವಿಜೃಂಭಣೆಯಿಂದ ನಡೆಯಲು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಮ್ಮೇಳನದಲ್ಲಿ ಸರ್ವರೂ ಭಾಗವಹಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶೈಲೇಶ ಪರಮಾನಂದ ಅವರು ಕರೆ ನೀಡಿದರು.
ಅವರು ಗುರುವಾರ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿಯನ್ನು ವೀಕ್ಷಿಸಿ, ಮಾಧ್ಯಮದ ಜೊತೆ ಮಾತನಾಡಿದರು. ಭವ್ಯವಾದ ಮೆರವಣಿಗೆಯ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆಯನ್ನು ನೀಡಲಾಗುತ್ತಿದ್ದು, ಮೂರು ದಿನಗಳ ಈ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು ಸಕ್ರಿಯರಾಗಿ ಭಾಗವಹಿಸಿ ಈ ಸಮ್ಮೇಳನವನ್ನು ಸ್ಮರಣೀಯಗೊಳಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಉ.ಕ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ದಾಂಡೇಲಿಯಲ್ಲಿ ಮನೆ ಮಾಡಿದೆ. ಜಿಲ್ಲೆಯ ಹಿರಿಯ ಸಾಹಿತಿ ರೋಹಿದಾಸ ನಾಯ್ಕ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ನಾಡಿನ ಹಿರಿಯ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಚಿವರಾದಿಯಾಗಿ ಶಾಸಕರು, ಜನಪ್ರತಿನಿಧಿಗಳು, ನಾಡಿನ ಹಿರಿಯ ಸಾಹಿತಿಗಳು, ದಿಗ್ಗಜರು, ಗಣ್ಯ ಮಹನೀಯರು ಭಾಗವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ನಾಡಿನ 10 ಕಲಾತಂಡಗಳು ಭಾಗವಹಿಸುವ ಮೂಲಕ ಮೆರವಣಿಗೆಗೆ ವಿಶೇಷವಾದ ಮೆರುಗನ್ನು ತಂದು ಕೊಡಲಿದೆ. ಮೂರು ದಿನಗಳ ಈ ಸಮ್ಮೇಳನದಲ್ಲಿ 25 ಕನ್ನಡ ಸಾಹಿತ್ಯ ಕೃತಿಗಳು ಲೋಕಾರ್ಪಣೆಯಾಗಲಿದೆ. ಈ ಹಿಂದಿನ ಎಲ್ಕಾ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಗೌರವ ಸನ್ಮಾನ ನಡೆಯಲಿದೆ. ವಿವಿಧ ಕ್ಷೇತ್ರಗಳ 25 ಜನರಿಗೆ ಗೌರವ ಪುರಸ್ಕಾರವನ್ನು ನೀಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ರಜತ ಗೌರವವನ್ನು ನೀಡಲಾಗುತ್ತದೆ. ಈ ಸಮ್ಮೇಳನದಲ್ಲಿ ನಾಡು-ನುಡಿ, ಭಾಷೆ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಯ ಕುರಿತಂತೆ ವಿಚಾರಗೋಷ್ಠಿಗಳು ನಡೆಯಲಿದೆ. ನಾಲ್ಕು ಪ್ರಾಧಿಕಾರಗಳ ಅಧ್ಯಕ್ಷರು ಒಂದೇ ವೇದಿಕೆಯಲ್ಲಿ ಭಾಗವಹಿಸುತ್ತಿರುವುದು ಈ ಸಮ್ಮೇಳನದ ವಿಶೇಷವಾಗಿದೆ. ದಾಂಡೇಲಿ ಇಡೀ ಕನ್ನಡಮಯವಾಗಿದೆ. ಇಲ್ಲಿಯ ಕನ್ನಡದ ಮನಸುಗಳು ಈ ಅಕ್ಷರ ಜಾತ್ರೆಯ ಯಶಸ್ಸಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಇಲ್ಲಿಯ ಕನ್ನಡದ ಮನಸ್ಸುಗಳು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುವುದರ ಜೊತೆ ಜೊತೆಯಲ್ಲಿ ಕನ್ನಡದ ಬ್ಯಾನರ್, ಬಂಟಿಂಗ್ಸ್, ಪತಾಕೆಗಳಿಂದ ದಾಂಡೇಲಿ ನಗರದಲ್ಲಿ ಕನ್ನಡದ ಡಿಂಡಿಮವನ್ನು ಬಾರಿಸಿದ್ದಾರೆ. ದಾಂಡೇಲಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಕನ್ನಡದ ಮನಸ್ಸುಗಳು ಈ ಸಮ್ಮೇಳನವನ್ನು ಐತಿಹಾಸಿಕವನ್ನಾಗಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸಿದ್ದಾರೆ. ಮೂರು ದಿನಗಳ ಈ ಅಕ್ಷರ ಜಾತ್ರೆಯಲ್ಲಿ ಎಲ್ಲಾ ಕನ್ನಡಾಭಿಮಾನಿಗಳು ಭಾಗವಹಿಸಿ ಈ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ಸಮ್ಮೇಳನವನ್ನಾಗಿಸಲು ಸಹಕರಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ, ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ಪ್ರಮುಖರಾದ ಮೋಹನ ಹಲವಾಯಿ, ಎಸ್.ಎಚ್.ಗೌಡ, ಎಂ.ಆರ್.ನಾಯಕ, ಪ್ರವೀಣ ನಾಯಕ, ಮುಸ್ತಾಕ ಶೇಖ, ರವಿ ಸುತಾರ ಉಪಸ್ಥಿತರಿದ್ದರು.
