ದಾಂಡೇಲಿ :
ಸಮಾಜ ಸೇವೆಗಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಂತಹ ವಾತಾವರಣ ಈಗಿಲ್ಲ. ಈಗ ಕಾಲ ಬದಲಾಗಿದೆ. ರಾಜಕಾರಣದಲ್ಲಿ ಇಂದು ನೈತಿಕ ಮೌಲ್ಯ ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ. ಈ ನಿಟ್ಟಿನಲ್ಲಿ ಯುವ ಜನತೆಗೆ ನೈತಿಕತೆಯ ರಾಜನೀತಿಯ ಜಾಗೃತಿ ಅತಿ ಅವಶ್ಯವಾಗಿ ಬೇಕಾಗಿದೆ ಎಂದು ಉತ್ತರಕನ್ನಡ ಜಿಲ್ಲೆಯ ಮಾಜಿ ಜಿಲ್ಲಾ ಪರಿಷತ್ತು ಅಧ್ಯಕ್ಷ ರಮಾನಂದ ನಾಯಕ ಅವರು ಹೇಳಿದರು.
ಅವರು ಭಾನುವಾರ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ನೈತಿಕತೆಯ ರಾಜನೀತಿ ಮತ್ತು ಉತ್ತರ ಕನ್ನಡ ಎಂಬ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಇಂದು ಕಾಲ ಬದಲಾಗಿದೆ. ಕೌಟುಂಬಿಕ ರಾಜಕೀಯ, ಕುರ್ಚಿಗಾಗಿ ಬಡಿದಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಜಿಲ್ಲೆಯಲ್ಲಿ ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರು ನೈತಿಕ ರಾಜಕಾರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದು ಸದಾ ಸ್ನರಣೀಯ. ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಯಾಹ್ಯಾ ಅವರಂಥ ಮುತ್ಸದಿ ನಾಯಕರು ಉತ್ತರ ಕನ್ನಡಕ್ಕೆ ನೈತಿಕ ರಾಜಕಾರಣವನ್ನು ಪರಿಚಯಿಸಿದ ಹಿರಿಮೆಯನ್ನು ಹೊಂದಿದವರಾಗಿದ್ದಾರೆ. ಆದರೆ ಇಂದು ಆ ನೈತಿಕತೆಯನ್ನು ಹುಡುಕುವ ಸ್ಥಿತಿಯಲ್ಲಿ ನಾವಿದ್ದೇವೆ. ರಾಜಕಾರಣಿಗಳಿಗೆ ಮತ್ತು ರಾಜಕಾರಣಕ್ಕೆ ನೈತಿಕ ಪಾಠವನ್ನು ಮುಂದಿನ ಪೀಳಿಗೆಗೆ ತೆರೆದಿಡಬೇಕಾದ ಅನಿವಾರ್ಯತೆಯಿದೆ ಎಂದು ಅವರು ಅಭಿಪ್ರಾಯಿಸಿ, ಕನ್ನಡದ ಕಾರ್ಯಕ್ರಮಕ್ಕೆ ಯಾರು ತೊಂದರೆಕೊಡಬಾರದು. ಕನ್ನಡದ ಬಗ್ಗೆ ಅಭಿಮಾನ ಇಲ್ಲದಿದ್ದವರು ಮಾತ್ರ ಸಮ್ಮೇಳನಕ್ಕೆ ಅಡ್ಡಿ ಪಡಿಸಿಸುವ ಕೃತ್ಯಕ್ಕೆ ಕೈ ಹಾಕುತ್ತಾರೆ ಎಂದರು.
ಹೊನ್ನಾವರದ ಲೇಖಕಿ ಸುಧಾ ಭಂಡಾರಿ ಅವರು ದಿನಕರ ದೇಸಾಯಿ ಮತ್ತು ಸಾಮಾಜಿಕ ಹೋರಾಟ ವಿಷಯದ ಬಗ್ಗೆ ಮಾತನಾಡುತ್ತಾ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೆ ದಿನಕರ ದೇಸಾಯಿಯವರ ಕೊಡುಗೆ ಅವಿಸ್ಮರಣಿಯವಾಗಿದೆ. ರಾಜಕೀಯ ಏಳುಬೀಳುಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ ಶ್ರೇಯಸ್ಸು ದಿನಕರ ದೇಸಾಯಿ ಅವರಿಗೆ ಸಲ್ಲಬೇಕು ಎಂದರು.
ಸಿದ್ದಾಪುರದ ಹಿರಿಯ ಪತ್ರಕರ್ತ ಕಾಶ್ಯಪ್ಪ ಪರ್ಣಕುಟಿ ಅವರು ರಾಮಕೃಷ್ಣ ಹೆಗಡೆ ಮತ್ತು ಜನಪರ ನಿಲವು ವಿಚಾರದ ಬಗ್ಗೆ ಮಾತನಾಡುತ್ತಾ ರಾಮಕೃಷ್ಣ ಹೆಗಡೆಯವರದ್ದು ಜನಪರ ರಾಜಕಾರಣವಾಗುತ್ತು. ರಾಜಕಾರಣದಲ್ಲಿ ಲೋಕಕ್ಕಾಗಿ ಬದುಕುವವರು, ತಮಗಾಗಿ ಬದುಕುವವರು ಹೀಗೆ ಈ ಎರಡು ವರ್ಗಗಳಿದ್ದು, ಆ ಪೈಕಿ ಲೋಕಕ್ಕಾಗಿ ತನ್ನ ರಾಜಕೀಯ ಬದುಕನ್ನು ನಡೆಸಿದವರು ರಾಮಕೃಷ್ಣ ಹೆಗಡೆಯವರು. ರಾಜ್ಯದಲ್ಲಿ ಅನೇಕ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಯನ್ನು ತರುವ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದಂತಹ ರಾಜಕಾರಣಿ ಇದ್ದರೇ ಅದು ರಾಮಕೃಷ್ಣ ಹೆಗಡೆಯವರು ಎನ್ನುವುದನ್ನು ಅಭಿಮಾನದಿಂದ ಹೇಳಬೇಕು ಎಂದರು.
ಕುಮಟಾದ ಸಾಹಿತಿ ಪುಟ್ಟು ಕುಲಕರ್ಣಿ ಅವರು ಬಿ.ವಿ ನಾಯಕ ಮತ್ತು ಬದ್ಧತೆ ರಾಜಕಾರಣದ ಬಗ್ಗೆ ಮಾತನಾಡುತ್ತಾ ಬಿ.ವಿ.ನಾಯಕ ಅವರ ಬದ್ಧತೆ ಮತ್ತು ವ್ಯಕ್ತಿತ್ವ ಸದಾ ಅನುಕರಣೀಯ ಹಾಗೂ ಅಭಿನಂದನೀಯ. ತಾವು ನಂಬಿಕೊಂಡು ಬಂದ ತತ್ವಕ್ಕೆ ಅನುಗುಣವಾಗಿ ತಾನಿದ್ದು ಸಮಾಜಕ್ಕೊಂದು ಉಪಯುಕ್ತ ಸಂದೇಶವನ್ನು ಸಾರಿದ ಧೀಮಂತ ವ್ಯಕ್ತಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ 2021 ರ ನಂತರ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಅವಾಂತರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಂದಾದ ನಡೆದ ಹಣದ ಅವ್ಯವಹಾರ, ಸರ್ವಾಧಿಕಾರಿ ಧೋರಣೆ ಕನ್ನಡ ಸಾಹಿತ್ಯ ಪರಿಷತ್ತು ಎತ್ತ ಸಾಗುತ್ತಿದೆ ಎಂಬ ನೋವು ರಾಜ್ಯದ ಜನತೆಗೆ ಸದಾ ಕಾಡುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಮನ ಮಿರಾಶಿ, ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರನಾಥ ನಾಯ್ಕ ಅವರು ಮೊದಲಾದವರು ಭಾಗವಹಿಸಿದ್ದರು.
ರಾಮಾ ನಾಯ್ಕ ಸ್ವಾಗತಿಸಿದರು. ಜೊಯಿಡಾದ ಸೀತಾ ದಾನಗೇರಿ ವಂದಿಸಿದರು. ಭಾಸ್ಕರ ಗಾಂವಕರ ಮತ್ತು ಯಶವಂತ ನಾಯ್ಕ ನಿರೂಪಿಸಿದರು.
