ಭಟ್ಕಳ:
ಭಟ್ಕಳ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ಬಂದಿದ್ದು, ಆತಂಕದ ವಾತಾವರಣ ಸೃಷ್ಠಿಯಾಗಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 7.20ರ ವೇಳೆಗೆ ಗಯನಾ ರಮೇಶ್ ಹೆಸರಿನ ಮೇಲ್ ಖಾತೆಯಿಂದ ಭಟ್ಕಳ ತಹಶೀಲ್ದಾರ್ ಅವರಿಗೆ ಮೇಲ್ ಒಂದು ಬಂದಿದ್ದು ಕಚೇರಿಯಲ್ಲಿ ಶೀಘ್ರದಲ್ಲೇ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಸಂದೇಶ ರವಾನಿಸಿದ್ದಾರೆ, ಇದರಲ್ಲಿ ತಮಿಳರು ಮತ್ತು ಪಾಕಿಸ್ತಾನಿಗಳ ಸೇಡು ಎಂಬ ಉಲ್ಲೇಖಿಸಿದ್ದಾರೆ.
ಬೆದರಿಕೆ ಸಂದೇಶ ಲಭಿಸಿದ ಕೂಡಲೇ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಭಟ್ಕಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕಾರವಾರದಿಂದ ಬಾಂಬ್ ನಿಷ್ಕ್ರೀಯ ದಳವನ್ನು ಭಟ್ಕಳಕ್ಕೆ ಕರೆಸಿಕೊಳ್ಳಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ, ಯಾವುದೇ ಅಪಾಯ ಸಂಭವಿಸದಂತೆ ಕಚೇರಿ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.
