ದಾಂಡೇಲಿ :
ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಎಂ.ಉಷಾ ಯೋಜನೆಯ ಆಶ್ರಯದಡಿ “ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು” ಎಂಬ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಯ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಾನಂದ ನಾಯಕ ಅವರು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸುವ ಮೂಲಕ ಬೌದ್ಧಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಆಗ ಭವಿಷ್ಯದ ಜೀವನವನ್ನು ಸದೃಢವಾಗಿ ಕಟ್ಟಲು ಸಾಧ್ಯವಿದೆ. ಮಾಧ್ಯಮ ಕ್ಷೇತ್ರದಲ್ಲಿ ವಿಪುಲ ಉದ್ಯೋಗವಕಾಶಗಳಿದ್ದು, ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಈ ಅವಕಾಶವನ್ನು ಅಪ್ಪಿಕೊಳ್ಳಲು ಈಗಿಂದಲೇ ಅಣಿಯಾಗಬೇಕು. ಈ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಗಾರವು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಸಂದೇಶ್ ಎಸ್.ಜೈನ್ ಈ ಜಗತ್ತಿನಲ್ಲಿ ಘನಗೋರ ಅವಘಡಗಳು, ದುರಂತಗಳು, ಅನಾಹುತಗಳು ಅವಕಾಶಗಳನ್ನು ಮತ್ತು ಹೊಸತನಗಳನ್ನು ತೆರೆದಿಟ್ಟುಕೊಂಡು ಸಂಭವಿಸಿದೆ. ಇಡೀ ಜಗತ್ತಿಗೆ ಸಂಕಷ್ಟವನ್ನು ತಂದುಕೊಟ್ಟ ಕೊರೊನಾದಿಂದಾಗಿ ಬದುಕೇ ದುಸ್ತರದ ಸಂದರ್ಭದಲ್ಲಿಯೂ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಸಮಾಜದ ಮುಖ್ಯ ಭೂಮಿಕೆಗೆ ಬಂದ ಪರಿಣಾಮವಾಗಿ ರಾಜ್ಯದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಅದರಲ್ಲೇ ತಮ್ಮ ಬದುಕನ್ನು ಕಂಡುಕೊಳ್ಳುವಂತಾಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಯೂಟೂಬರ್ ಗಳು ಸೃಷ್ಟಿಯಾಗಿ ತಮ್ಮದೇ ಆದ ರೀತಿಯಲ್ಲಿ ಸ್ವತಂತ್ರ ಉದ್ಯೋಗವನ್ನು ಕೈಗೊಂಡು ನೆಮ್ಮದಿಯ ಜೀವನವನ್ನು ಕಂಡುಕೊಂಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ, ನಿರುದ್ಯೋಗ ಸಮಸ್ಯೆ ಇದೆ ಎಂದು ಅವರಿವರ ಮೇಲೆ ಬೆರಳು ತೋರಿಸುವುದು ತಪ್ಪು. ಇಂದು ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಅವಕಾಶಗಳು ಸಾಕಷ್ಟಿವೆ. ಅವಕಾಶಗಳನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಕ್ರಿಯಾಶೀಲತೆ ಮತ್ತು ಮನಸ್ಸು ನಮ್ಮದಾಗಬೇಕಾಗಿದೆ. ಇಂದಿನ ದಿನಮಾನದಲ್ಲಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬಹುದು. ಬಹಳಷ್ಟು ಅವಕಾಶಗಳು ನಮ್ಮ ಮುಂದಿದ್ದು, ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯುವ ಜನತೆ ಯೋಚನೆ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಡಿ.ಒಕ್ಕುಂದ ಅವರು ಭವಿಷ್ಯದ ಈ ನಾಡಿನ ಪ್ರಜ್ಞಾವಂತ ನಾಗರಿಕರಾಗಬೇಕಾದ ವಿದ್ಯಾರ್ಥಿಗಳು ಕನಸನ್ನು ಹೊಂದಿರಬೇಕು. ಕನಸು ನನಸಾಗಿಸಲು ಸದಾ ಪ್ರಯತ್ನಶೀಲರಾಗಬೇಕು. ಅವಕಾಶಗಳು ಅರಸಿ ಬರಬೇಕಾದರೆ ಅಂತಹ ಅವಕಾಶಗಳನ್ನು ಪಡೆಯುವ ಅರ್ಹತೆ ನಮ್ಮಲ್ಲಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಎಲ್ಲವನ್ನು ತಿಳಿದುಕೊಳ್ಳುವ ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉನ್ನತಿ ಕಟ್ಟಿಟ್ಟ ಬುತ್ತಿ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಪಡಿಸಿದ ಕಾಲೇಜಿನ ವೆಬ್ಸೈಟನ್ನು ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ಧಾರವಾಡದ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಧಾರವಾಡದ ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕಿ ಸಿ.ಜಿ.ಮಂದಾಕಿನಿ, ಪ್ರಾಧ್ಯಾಪಕ ಡಾ.ಅರುಣ್ ಜೋಳದ ಕೂಡ್ಲಗಿ ಉಪಸ್ಥಿತರಿದ್ದರು.
ವರ್ಷಾ ಕೋಲೆ ಪ್ರಾರ್ಥಿಸಿದ ಕಾರ್ಯಕ್ರಮಕ್ಕೆ ಪ್ರಾಧ್ಯಾಪಕ ಮನೋಹರ ಉಡಚಂಚಿ ಸ್ವಾಗತಿಸಿದರು. ಪ್ರಾಧ್ಯಾಪಕಿ ನಿಶಾತ್ ಶರೀಫ್ ಅತಿಥಿಗಳನ್ನು ಪರಿಚಯಿಸಿ ಸಂದೇಶವನ್ನು ವಾಚಿಸಿದರು. ಐಕ್ಯೂಎಸಿ ಸಂಚಾಲಕಿ ತಸ್ಲಿಮಾ ಜೋರುಂ ವಂದಿಸಿದರು. ಉಪನ್ಯಾಸಕ ಉಮೇಶ ಗೌಡ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮುಗಿದ ಬಳಿಕ ಧಾರವಾಡದ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿಯವರಿಂದ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು : ಪೂರ್ವ ಸಿದ್ಧತೆಯ ಬಗ್ಗೆ, ಧಾರವಾಡದ ಪ್ರಜಾವಾಣಿಯ ಮುಖ್ಯ ಉಪಸಂಪಾದಕಿ ಸಿ.ಜಿ.ಮಂದಾಕಿನಿಯವರಿಂದ ಪತ್ರಿಕಾ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು ಹಾಗೂ ಗುಲ್ಬರ್ಗದ ಡಾ. ಬಿ.ಆರ್ ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕ ಡಾ.ಅರುಣ್ ಜೋಳದ ಕೂಡ್ಲಗಿಯವರಿಂದ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಾವಕಾಶಗಳು ಎಂಬ ವಿಚಾರದ ಬಗ್ಗೆ ಉಪನ್ಯಾಸ ಜರುಗಿತು.
ತರಬೇತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
