ದಾಂಡೇಲಿ:
ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಲು ದಶಕಗಳ ಕಾಲ ಜನತೆ ಹಾಗೂ ಎಡಪಕ್ಷಗಳು ನಡೆಸಿದ ಐಕ್ಯ ಹೋರಾಟಗಳ ಮೂಲಕ ಗಳಿಸಿದ ಅತ್ಯಂತ ಮಹತ್ವದ ಹಕ್ಕಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯ ಹೆಸರನ್ನು ಬದಲಾಯಿಸುವ ಪ್ರಯತ್ನವಾಗಿ ಪ್ರಸ್ತಾವಿತ VB-GRAMG ಮಸೂದೆಯನ್ನು ಮಂಡಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರಕಾರದ ನಡೆಯನ್ನು ಭಾರತ ಪ್ರಜಾಸತ್ತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ತಿಳಿಸಿದ್ದಾರೆ.
ಅವರು ಇಂದು ಬೆಳಿಗ್ಗೆ ಮಾಧ್ಯಮದ ಜೊತೆ ಮಾತನಾಡುತ್ತ ಉದ್ದೇಶಿತ ಮಸೂದೆಯಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ವಾಸ್ತವದಲ್ಲಿ ಯೋಜನೆಯ ಹಣಕಾಸಿನ ಮಾದರಿಯನ್ನು ಮೂಲಭೂತವಾಗಿ ಬದಲಾಯಿಸುವ ಮೂಲಕ ಹೊಣೆಗಾರಿಕೆಯಿಂದ ಕೇಂದ್ರ ಸರಕಾರವು ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದಿದ್ದಾರೆ.
ಪ್ರಸ್ತಾವಿತ ಮಸೂದೆಯು ವೇತನ ಪಾವತಿಗೆ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು 100 ಪ್ರತಿಶತದಿಂದ ರಾಜ್ಯಗಳಿಗೆ 60:40 ಹಂಚಿಕೆ ವ್ಯವಸ್ಥೆಗೆ ಕಡಿಮೆ ಮಾಡುತ್ತದೆ. ಇದು ನಿರುದ್ಯೋಗ ಭತ್ಯೆಯ ಹೊರೆ ಮತ್ತು ವಿಳಂಬ ಪಾವತಿಗಳಿಗೆ ಪರಿಹಾರವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಮೇಲೆ ವರ್ಗಾಯಿಸುತ್ತದೆ.
ಈ ಮಸೂದೆಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದುಹಾಕುವ ಕ್ರಮವನ್ನು ಡಿವೈಎಫ್ಐ ತೀವ್ರವಾಗಿ ವಿರೋಧಿಸುತ್ತದೆ. MGNREGA ಅನ್ನು ಮರುಹೆಸರಿಸುವ ಪ್ರಯತ್ನವು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ; ಇದು ಉದ್ದೇಶಪೂರ್ವಕ ರಾಜಕೀಯ ಕುಟಿಲ ನೀತಿಯ ಕೃತ್ಯವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಸ್ಮರಣೆ ಮತ್ತು ರಾಷ್ಟ್ರೀಯ ಸಂಸ್ಥೆಗಳಿಂದ ಗಾಂಧೀಜಿಯವರನ್ನು ಅಳಿಸಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ ಮತ್ತು ಈ ಮರುನಾಮಕರಣವು ಆ ದೊಡ್ಡ ಸೈದ್ಧಾಂತಿಕ ಯೋಜನೆಯ ಭಾಗವಾಗಿದೆ. ಗಾಂಧೀಜಿಯವರ ಹೆಸರನ್ನು ಅಳಿಸುವ ಪ್ರಯತ್ನವು ಕಾರ್ಮಿಕರು ಮತ್ತು ಗ್ರಾಮೀಣ ಬಡವರ ಹಕ್ಕುಗಳ ಮೇಲಿನ ನಿರ್ಲಜ್ಯ ಧಾಳಿಯೇ ಆಗಿದೆ ಎಂದರು.
ತನ್ನ ರಾಜಕೀಯ ಲಾಭಕ್ಕಾಗಿ ಯೋಜನೆಯ ಮರು ನಾಮಕರಣಕ್ಕೆ ಮುಂದಾಗಿರುವ ಈ ದುಷ್ಟ ಕ್ರಮವನ್ನು ಡಿವೈಎಫ್ಐ ಪ್ರಬಲವಾಗಿ ವಿರೋಧಿಸುತ್ತದೆ. ಉದ್ಯೋಗ ಹಕ್ಕುಗಳು, ಫೆಡರಲ್ ತತ್ವಗಳು ಮತ್ತು ಸಾಮಾಜಿಕ ನ್ಯಾಯದ ಮೇಲಿನ ಈ ದಾಳಿಯ ವಿರುದ್ಧ ಪ್ರಬಲ ಪ್ರತಿರೋಧ ನಡೆಸಲು ಯುವಜನತೆಗೆ ಕರೆ ನೀಡಿದ್ದಾರೆ.
