ಕಾರವಾರ:
ಗಾಯಕ ಸೋನು ನಿಗಮ ಅವರ ಮೇಲೆ ಕನ್ನಡ ವಿರೋಧಿ ಹೇಳಿಕೆಗಳ ಆರೋಪ ಇರುವ ಕಾರಣ ಕರಾವಳಿ ಉತ್ಸವದಲ್ಲಿರುವ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಐದು ಕೋಟಿ ರೂ. ಅನುದಾನ ಇದ್ದರೂ, ಕನ್ನಡದ ಕಲಾವಿದರನ್ನು ಕಡೆಗಣಿಸಿ ಹೊರರಾಜ್ಯದ ಹಾಗೂ ಪಾಶ್ಚಿಮಾತ್ಯ ಶೈಲಿಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಆರಂಭದಲ್ಲಿ ಪ್ರತಿದಿನ ಸಂಜೆ ಸ್ಥಳೀಯ ಕಲಾವಿದರಿಗೆ ವೇದಿಕೆ ನೀಡುವುದಾಗಿ ಹೇಳಿದ್ದರೂ ಅಂತಿಮ ಕಾರ್ಯಕ್ರಮ ಪಟ್ಟಿಯಲ್ಲಿ ಬದಲಾವಣೆ ಕಂಡುಬAದಿದೆ. ಅಲ್ಲದೇ ಈ ಹಿಂದೆ ಗಾಯಕ ಸೋನು ನಿಗಮ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿದ ಕಾರಣ ಅವರನ್ನು ಕಾರ್ಯಕ್ರಮದಿಂದ ಕೈಬಿಡಬೇಕು ಎಮದು ಮನವಿ ಮೂಲಕ ಒತ್ತಾಯಿಸಲಾಗಿದೆ.
ಹಿಂದಿನ ವರ್ಷಗಳಲ್ಲಿ ಉತ್ಸವದ ವಿವಿಧ ಜವಾಬ್ದಾರಿಗಳನ್ನು ಜಿಲ್ಲೆಯ ಕಲಾವಿದರು ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಹೊರಗಿನ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಇದರಿಂದ ಸ್ಥಳೀಯರ ಉದ್ಯೋಗಕ್ಕೆ ಧಕ್ಕೆ ಉಂಟಾಗಿದೆ. ಕಳೆದ ಬಾರಿ ಜನಮನ ಸೆಳೆದಿದ್ದ ಕೃಷಿ, ಫಲಪುಷ್ಪ, ಚಿತ್ರಕಲೆ ಪ್ರದರ್ಶನಗಳು ಹಾಗೂ ಕ್ರೀಡಾ ಸ್ಪರ್ಧೆಗಳ ಬದಲಿಗೆ ಈ ಬಾರಿ ಅನ್ಯ ಸಂಸಕೃತಿಯ ಪ್ರದರ್ಶನಗಳಿಗೆ ಒತ್ತು ನೀಡಲಾಗಿದೆ ಎಂದಿದೆ. ಸರಕಾರ ಮತ್ತು ನ್ಯಾಯಾಲಯದ ಆದೇಶದಂತೆ ಉತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ರಾತ್ರಿ 11 ಗಂಟೆಗೆ ಮುಕ್ತಾಯಗೊಳಿಸಬೇಕು. ಕನ್ನಡ ವಿರೋಧಿ ಕಾರ್ಯಕ್ರಮಗಳು ನಡೆದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ಬಳಿಕ ಚುನಾವಣಾ ತಹಸೀಲ್ದಾರ ಪ್ರಮೋದ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಯ ನಾಗೇಕರ ಸೇರಿದಂತೆ ಪದಾಧಿಕಾರಿಗಳು ಇದ್ದರು.
