ಅಂಕೋಲಾ:
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಪಟ್ಟದ ಕುರಿತಾದ ಚರ್ಚೆಗಳು ಕಾವು ಪಡೆದುಕೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅಂಕೋಲಾದ ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ಸುಮಾರು ಒಂದೂವರೆ ತಾಸು ಕಾಲ ಅವರು ನಡೆಸಿದ ‘ಪ್ರಶ್ನಾ ಕಾರ್ಯ’ ಮತ್ತು ಅವರ ಮುಗುಳುನಗೆ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ
ಬೆಳಿಗ್ಗೆ ಗೋಕರ್ಣಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೊಂದಿಗೆ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರಿಗೆ ಬಿಲ್ವಪತ್ರೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿ, ಆತ್ಮಲಿಂಗದ ದರ್ಶನ ಪಡೆದರು. ಬಳಿಕ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂಕೋಲಾದತ್ತ ಪ್ರಯಾಣ ಬೆಳೆಸಿದರು.
ಆಂದ್ಲೆಯಲ್ಲಿ ದೀರ್ಘಕಾಲದ ಪೂಜೆ ಮತ್ತು ‘ದೇವಪ್ರಶ್ನೆ’
ಅಂಕೋಲಾದ ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ಅಮ್ಮನವರ ಸನ್ನಿಧಿಗೆ ಭೇಟಿ ನೀಡಿದ ಡಿಸಿಎಂ, ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ದೇವಿಯ ಮುಂದೆ ಸುದೀರ್ಘ ಸಮಯ ಕಳೆದರು. ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ದೇವಸ್ಥಾನದಲ್ಲಿ ಕುಳಿತು ಅರ್ಚಕರ ಮೂಲಕ ‘ಪ್ರಶ್ನಾ ಕಾರ್ಯ’ ನಡೆಸಿದರು. ನಾಗದೇವತೆ ಹಾಗೂ ತುಳಸಿಗೆ ವಿಶೇಷ ಪೂಜೆ ಸಲ್ಲಿಸಿದ ಶಿವಕುಮಾರ್, ದೇವಿಯ ಆಶೀರ್ವಾದ ಪಡೆದರು.
“ಹೈಕಮಾಂಡ್ ನಿರ್ಧಾರಕ್ಕೆ ಬದ್ಧ”: ಡಿಕೆಶಿ ಸ್ಪಷ್ಟನೆ
ಪೂಜೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಐದು ವರ್ಷಗಳ ಹಿಂದೆ ಕುಟುಂಬದ ಕೆಲಸಕ್ಕಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೆ, ಅದು ಈಡೇರಿದೆ. ಹಾಗಾಗಿ ಮತ್ತೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ, ಇಂದು ಬಂದಿದ್ದೇನೆ. ತಾಯಿ ಮತ್ತೆ ಆಶೀರ್ವಾದ ಮಾಡಲಿ ಎಂದು ಕೇಳಿಕೊಂಡಿದ್ದೇನೆ,” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ‘ನಾನೇ ಐದು ವರ್ಷ ಸಿಎಂ’ ಎಂದು ಹೇಳಿದ ಕುರಿತು ಪ್ರತಿಕ್ರಿಯಿಸಿದ ಅವರು:
“ನಾನು ಯಾವತ್ತೂ ಅವರು ಐದು ವರ್ಷ ಇರಲ್ಲ ಎಂದು ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತಿದೆ. ಹೈಕಮಾಂಡ್ ಸಿಎಂ ಪರವಾಗಿ ಇರುವುದರಿಂದಲೇ ಅವರು ಆ ಸ್ಥಾನದಲ್ಲಿದ್ದಾರೆ. ನಮ್ಮಲ್ಲಿ ಒಪ್ಪಂದವಾಗಿದೆ, ಅದರಂತೆ ನಡೆದುಕೊಳ್ಳುತ್ತೇವೆ. ನಾವಿಬ್ಬರೂ ಈ ಬಗ್ಗೆ ಮಾತನಾಡಿಕೊಂಡಿದ್ದೇವೆ ಹಾಗೂ ಹೈಕಮಾಂಡ್ ಅನ್ನೂ ಒಪ್ಪಂದಕ್ಕೆ ತಂದಿದ್ದೇವೆ.”
ಮುಗುಳುನಗೆಯಲ್ಲೇ ಅಡಗಿದೆಯೇ ಗುಟ್ಟು?
ಮುಖ್ಯಮಂತ್ರಿ ಸ್ಥಾನದ ಇಚ್ಛೆ ಹಾಗೂ ಸಮಸ್ಯೆ ಪರಿಹಾರಕ್ಕೆ ದಿನಾಂಕ ನಿಗದಿಯಾಗಿದೆಯೇ ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ಡಿಕೆಶಿ ಯಾವುದೇ ಮೌಖಿಕ ಉತ್ತರ ನೀಡದೆ, ಕೇವಲ ಸಾರ್ಥಕ ಭಾವದ ಮುಗುಳುನಗೆ ಬೀರುತ್ತಾ ಅಲ್ಲಿಂದ ನಿರ್ಗಮಿಸಿದರು.
“ಇಷ್ಟಾರ್ಥ ಈಡೇರಲಿದೆ”
ದೇವಸ್ಥಾನದ ಅರ್ಚಕರಾದ ಗಣೇಶ್ ಅವರು ಈ ಬಗ್ಗೆ ಮಾತನಾಡಿ, “ಡಿ.ಕೆ ಶಿವಕುಮಾರ್ ಅವರಿಗೆ ದೇವಿ ಜಗದೀಶ್ವರಿ ಪ್ರಸಾದ ನೀಡಿದ್ದಾಳೆ. ಅವರ ಮನಸ್ಸಿನ ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಅವರು ದೇವಿಯ ಮುಂದೆ ಯಾವ ಪ್ರಶ್ನೆ ಇಟ್ಟಿದ್ದಾರೆ ಎಂದು ಹೇಳಲಾಗದು, ಆದರೆ ಒಂದು ತಿಂಗಳ ನಂತರ ಮತ್ತೆ ಬರುವುದಾಗಿ ಅವರು ಹೇಳಿದ್ದಾರೆ,” ಎಂದು ತಿಳಿಸಿದರು.
