ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಜನತೆಯ ಬಹುದಿನಗಳ ಕನಸಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರವಾಗಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರು ಮಹತ್ವದ ಮತ್ತು ಖಡಕ್ ಘೋಷಣೆ ಮಾಡಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಸಿಗದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ದೇವರ ಸನ್ನಿಧಾನದಲ್ಲಿ ಶಪಥ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. “ಚುನಾವಣೆ ಸಂದರ್ಭದಲ್ಲಿ ನಾನು ಜನರಿಗೆ ಮಾತು ಕೊಟ್ಟಿದ್ದೆ. ಈ ಹಿಂದೆಯೂ ಕೂಡ ಆಸ್ಪತ್ರೆ ಆಗದಿದ್ದರೆ ರಾಜೀನಾಮೆ ನೀಡುವ ವಿಷಯ ಪ್ರಸ್ತಾಪಿಸಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಈ ಬಾರಿಯ ಬಜೆಟ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ನಾನು ದೇವರ ಸನ್ನಿಧಾನದಲ್ಲಿ ನಿಂತು ಹೇಳುತ್ತಿದ್ದೇನೆ, ಒಂದು ವೇಳೆ ಈ ಬಾರಿಯ ಬಜೆಟ್ನಲ್ಲಿ ಆಸ್ಪತ್ರೆಗೆ ಅನುದಾನ ಬಿಡುಗಡೆಯಾಗದಿದ್ದರೆ, ನಾನು ನೇರವಾಗಿ ಸ್ಪೀಕರ್ ಹಾಗೂ ಸಚಿವರ ಬಳಿ ತೆರಳಿ ನನ್ನ ರಾಜೀನಾಮೆ ಪತ್ರವನ್ನು ಕೊಟ್ಟು ಬರುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಎಂಸಿಎ (MCA) ಅಧ್ಯಕ್ಷರೂ ಆಗಿರುವ ಸತೀಶ್ ಸೈಲ್ ಅವರ ಈ ಹೇಳಿಕೆ ಈಗ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಮುಂಬರುವ ಬಜೆಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಸಿಗಲಿರುವ ಕೊಡುಗೆಯತ್ತ ಎಲ್ಲರ ಚಿತ್ತ ನೆಟ್ಟಂತಾಗಿದೆ.
