ಹಳಿಯಾಳ:
ತಾಲೂಕಿನ ಅಮ್ಮನಕೊಪ್ಪ ಗ್ರಾಮದ ಮೈಲಾರ ದೇವಸ್ಥಾನದಲ್ಲಿ ನಡೆದ ಹುಂಡಿ ಕಳ್ಳತನ ಪ್ರಕರಣವನ್ನು ಹಳಿಯಾಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಪ್ರಕರಣದ ಪ್ರಮುಖ ಆರೋಪಿತನನ್ನು ಬಂಧಿಸುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಅಮ್ಮನಕೊಪ್ಪ ಗ್ರಾಮದ ಮೈಲಾರ ದೇವಸ್ಥಾನದಲ್ಲಿ ರಾತ್ರಿ ವೇಳೆಯಲ್ಲಿ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ, ದೇವಾಲಯದ ಹುಂಡಿಯಲ್ಲಿದ್ದ ಸುಮಾರು ₹7,000 ನಗದು ಹಣವನ್ನು ಕಳ್ಳತನ ಮಾಡಿದ್ದರು. ಈ ಘಟನೆ ಭಕ್ತರಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹಳಿಯಾಳ ಪೊಲೀಸ್ ಠಾಣೆಯವರು ತಕ್ಷಣವೇ ತನಿಖೆ ಕೈಗೊಂಡಿದ್ದರು.
ಕಳ್ಳತನ ಪ್ರಕರಣದ ಪತ್ತೆಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಸುತ್ತಮುತ್ತಲ ಪ್ರದೇಶಗಳ ಸಿಸಿ ಟಿವಿ ದೃಶ್ಯಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಗುಪ್ತಚರ ಮಾಹಿತಿಯನ್ನು ಆಧರಿಸಿ ಆರೋಪಿತನ ಸುಳಿವು ಪತ್ತೆ ಹಚ್ಚಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿತನನ್ನು ಹಳಿಯಾಳ ನಗರ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧನದ ನಂತರ ನಡೆಸಿದ ವಿಚಾರಣೆಯಲ್ಲಿ ಆರೋಪಿತನು ಅಮ್ಮನಕೊಪ್ಪ ಗ್ರಾಮದ ಮೈಲಾರ ದೇವಸ್ಥಾನದ ಹುಂಡಿ ಕಳ್ಳತನದ ಜೊತೆಗೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಇರುವ ಮತ್ತೊಂದು ದೇವಸ್ಥಾನದಲ್ಲಿಯೂ ಇದೇ ರೀತಿಯ ಹುಂಡಿ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಇದರಿಂದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಕಳ್ಳತನ ನಡೆಸುತ್ತಿದ್ದನೆಂಬುದು ಸ್ಪಷ್ಟವಾಗಿದೆ.
ಆರೋಪಿತನಿಂದ ಕಳ್ಳತನ ಮಾಡಿದ್ದ ಹಣದಲ್ಲಿ ಉಳಿದಿದ್ದ ಸುಮಾರು ₹2,500 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಅಂದಾಜು ₹40,000 ಮೌಲ್ಯದ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನೂ ಜಪ್ತಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ಬಂಧಿತ ಆರೋಪಿತನು ಈ ಹಿಂದೆ ಕೂಡ ಕಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಹೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಈ ಯಶಸ್ವಿ ಬಂಧನ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೃಷ್ಣಮೂರ್ತಿ ಹಾಗೂ ಜಗದೀಶ ನಾಯ್ಕ ಅವರ ನಿರ್ದೇಶನದಂತೆ, ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ಸಿಪಿಐ ಜಯಪಾಲ್ ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಸವರಾಜ ಮಬನೂರ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಕೃಷ್ಣಾ ಅರಕೇರಿ (ತನಿಖೆ) ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಶೈಲ್ ಜಿ.ಎಂ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಗಣೇಶ, ಸುನಿಲ್ ಉಮೇಶ್ ತೇಲಿ, ಗಂಗಾಧರ, ರಾಜೇಶ್ ಮಿರಾಶಿ ಮತ್ತು ಕಾಶಿನಾಥ ಬಿಳ್ಳೂರ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
