ಕಾರವಾರ :
ನಗರದ ಟ್ಯಾಗೋರ್ ಕಡಲ ತೀರದಲ್ಲಿ ಡಿ.22 ರಿಂದ 28 ರ ವರೆಗೆ ನಡೆಯುವ ಕರಾವಳಿ ಉತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆಯು ಮುಂದಾಗಿದ್ದು ಸೂಕ್ತ ಬಂದೋಬಸ್ತ ಒದಗಿಸಲಾಗಿದೆ.
ಈ ಕುರಿತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮಾಹಿತಿ ನೀಡಿ, ಉತ್ಸವದ ಹಿನ್ನಲೆ ವಿಶೇಷವಾಗಿ 96 ಪೊಲೀಸ್ ಅಧಿಕಾರಿಗಳು ಹಾಗೂ 450 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷವಾಗಿ ಎರಡು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಅಲ್ಲದೇ ರಾತ್ರಿ ವೇಳೆ ವಿಶೇಷ ಗಸ್ತು ತಂಡ ರಚಿಸಲಾಗಿದೆ. ಸಾರ್ವಜನಿಕರಿಗೆ ಕಾರ್ಯಕ್ರಮದ ಸ್ಥಳದಲ್ಲಿ ಅನುಕೂಲವಾಗುವಂತೆ ಸಹಾಯ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆಗಳಲ್ಲಿ, ಕಡಲ ತೀರಗಳಲ್ಲಿ, ವೇದಿಕೆ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ಡ್ರೋನ್ ಕೂಡ ಬಳಸಲಾಗುತ್ತದೆ. ವಾಹನ ನಿಲುಗಡೆ ಸ್ಥಳದಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಕಡಲ ತೀರಗಳಲ್ಲಿ ಹೆಚ್ಚಿನ ಲೈಫ್ ಗಾರ್ಡ್ ನಿಯೋಜಿಸಿದ್ದು, ರಾತ್ರಿ ವೇಳೆ ಸಾರ್ವಜನಿಕರು ಸಮುದ್ರದಲ್ಲಿ ಇಳಿಯುವುದನ್ನು ಸಂಪೂರ್ಣವಾಗಿ ನಿಶೇಧಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 66 ರ ಮೇಲ್ಸೇತುವೆಯಲ್ಲಿ ವಾಹನ ನಿಲ್ಲಿಸದಂತೆ ನೋಡಿಕೊಳ್ಳಲು ಸಿಬ್ಬಂದಿ ನಿಯೋಜಿಸಲಾಗಿದೆ. ಕಳ್ಳತನ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳು ಮಫ್ತಿಯಲ್ಲಿ ಕೂಡ ಇರಲಿದ್ದಾರೆ. ಸಾರ್ವಜನಿಕರ ತುರ್ತು ಪರಿಸ್ಥಿತಿಗಾಗಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ವಾಹನ ನಿಲುಗಡೆ ಎಲ್ಲೆಲ್ಲಿ:
ಪೊಲೀಸ್ ಇಲಾಖೆಯಿಂದ ವಾಹನ ನಿಲುಗಡೆಗೆ ಹಾಗೂ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಕೋಲಾ ಕಡೆಯಿಂದ ಬರುವ ಬಸ್ ಹಾಗೂ ಟಿಟಿಗಳಿಗೆ ಹೆದ್ದಾರಿಯ ಎಡಭಾಗದ ಸರ್ವಿಸ್ ರಸ್ತೆಯ ಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಾರುಗಳಿಗೆ ಮೇಲ್ಸೇತುವೆಯ ಪಿಲ್ಲರ್ ಸಂಖ್ಯೆ 40 ವರೆಗೆ ಹಾಗೂ 40 ರಿಂದ 49ರ ವರೆಗೆ ದ್ವಿಚಕ್ರ ವಾಹನ,
ಮಾಜಾಳಿಯಿಂದ ಬರುವವರಿಗೆ ಪಿಲ್ಲರ್ ಸಂಖ್ಯೆ 50 ರಿಂದ 55 ವರೆಗೆ, ಕಾರುಗಳಿಗೆ 56 ರಿಂದ 70 ವರೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರವಾರದ ಜನತೆಗೆ ಇಲ್ಲಿನ ಎಂ.ಜಿ ರಸ್ತೆ ಹಾಗೂ ಮಾಲಾದೇವಿ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದ್ದಾರೆ.
