ಉತ್ತರ ಕನ್ನಡ:
ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ಸಂಗ್ರಹ ಆರೋಪದಡಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ಧಾಪುರ ಮತ್ತು ಹಳಿಯಾಳ ತಾಲೂಕುಗಳಲ್ಲಿ ಒಟ್ಟು ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಸಿದ್ಧಾಪುರ ತಾಲೂಕಿನ ಕೋಲ್ ಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘ ಬ್ಯಾಂಕ್ನ ಸಿಇಓ ಮಾರುತಿ ಯಶವಂತ ಮಾಲ್ವಿ ಅವರ ಮನೆ, ಕಚೇರಿ ಹಾಗೂ ಅಂಗಡಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಹಾಗೂ ಹಣ ಸಂಗ್ರಹಕ್ಕೆ ಸಂಬಂಧಿಸಿದ ದೂರುಗಳ ಹಿನ್ನೆಲೆ ಈ ದಾಳಿ ನಡೆದಿದ್ದು, ಆಸ್ತಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಇತರೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಸಿದ್ಧಾಪುರದಲ್ಲಿ ನಡೆದ ದಾಳಿಗೆ ಲೋಕಾಯುಕ್ತ ಪಿ.ಐ ವಿನಾಯಕ ಬಿಲ್ಲವ ನೇತೃತ್ವದ ತಂಡ ಮುನ್ನಡೆಸಿದೆ.ಇನ್ನೊಂದೆಡೆ ಹಳಿಯಾಳ ತಾಲೂಕಿನಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಗೆ ಡಿವೈಎಸ್ಪಿ ಧನ್ಯಾ ನಾಯಕ್ ನೇತೃತ್ವ ವಹಿಸಿದ್ದು, ಸಂಬಂಧಿಸಿದ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳಲ್ಲಿ ದಾಖಲೆಗಳ ಶೋಧನೆ ಮುಂದುವರಿದಿದೆ.
ಉತ್ತರ ಕನ್ನಡದ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದ್ದು, ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆ ವ್ಯಾಪಕವಾಗಿದೆ. ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ನಿವೃತ್ತ ಮಹಿಳಾ ಅಧಿಕಾರಿ ವಿಜಯಲಕ್ಷ್ಮಿ ಅವರ ನಿವಾಸದಲ್ಲೂ ಪರಿಶೀಲನೆ ನಡೆಯುತ್ತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಸ್. ಕಾಂಬಳೆ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆಯ ಜೊತೆಗೆ ನರಗುಂದದಲ್ಲಿರುವ ಕಾಂಬಳೆ ಅವರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಇದಲ್ಲದೆ ಉಡುಪಿ, ಮಂಗಳೂರು, ಕಾರವಾರ ಸೇರಿದಂತೆ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳ ಆಸ್ತಿ ಹಾಗೂ ಹಣಕಾಸು ವ್ಯವಹಾರಗಳ ಕುರಿತು ಸುದೀರ್ಘ ಪರಿಶೀಲನೆ ನಡೆಯುತ್ತಿದೆ.
ರಾಜ್ಯದ ಹಲವೆಡೆ ನಡೆದ ಈ ದಾಳಿಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ದಾಳಿ ಅಂತ್ಯವಾದ ಬಳಿಕ ಅಕ್ರಮ ಆಸ್ತಿ, ನಗದು, ದಾಖಲೆಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
