ದಾಂಡೇಲಿ :
ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ರೋಟರಿ ಕ್ಲಬ್ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ದಾಂಡೇಲಿಯ ರೋಟರಿ ಕ್ಲಬ್ಬಿನ ಸಮಾಜಮುಖಿ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ಹೇಳಿದರು.
ಅವರು ಮಂಗಳವಾರ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ರೋಟರಿ ಕ್ಲಬ್ ಕೊಡುಗೆಯಾಗಿ ನೀಡಿದದ 5 ಬ್ಯಾರಿಕೇಡ್ಸ್ ಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಇಲಾಖೆಯ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೂ ರೋಟರಿ ಕ್ಲಬ್ ಸಹಕಾರ ನೀಡುತ್ತಿರುವುದು ಸಂತಸ ತಂದಿದೆ. ಈ ಯೋಜನೆಯ ಮೂಲಕ ರೋಟರಿ ಕ್ಲಬ್ ನಾಗರಿಕ ಸಂಸ್ಥೆಗಳನ್ನು ಬೆಂಬಲಿಸುವ ಮತ್ತು ದಾಂಡೇಲಿಯಲ್ಲಿ ಸುರಕ್ಷಿತ, ಶಿಸ್ತುಬದ್ಧ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಸಮುದಾಯಕ್ಕೆ ಕೊಡುಗೆ ನೀಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿ ರೋಟರಿ ಕ್ಲಬ್ಬಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಅವರು ಮಾತನಾಡಿ ಸಾರ್ವಜನಿಕ ಕಾರ್ಯಕ್ರಮಗಳು, ಹಬ್ಬಗಳು, ತುರ್ತು ಪರಿಸ್ಥಿತಿಗಳು ಮತ್ತು ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಪರಿಣಾಮಕಾರಿ ಜನಸಂದಣಿ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಪೊಲೀಸ್ ಠಾಣೆಗೆ ನೆರವಾಗುವ ನಿಟ್ಟಿನಲ್ಲಿ ಸಮುದಾಯ ಬೆಂಬಲ ಉಪಕ್ರಮವಾಗಿ ನಮ್ಮ ರೋಟರಿ ಕ್ಲಬ್ ಬ್ಯಾರಿಕೇಡ್ಸ್ ಗಳನ್ನು ಹಸ್ತಾಂತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದರು.
ಪಿಎಸ್ಐ ಗಳಾದ ಅಮೀನ್ ಅತ್ತಾರ್, ಕಿರಣ್ ಪಾಟೀಲ್ ಮತ್ತು ಜಗದೀಶ ನಾಯ್ಕ ಅವರು ರೋಟರಿ ಕ್ಲಬ್ಬಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಮಿಥುನ್ ನಾಯಕ, ರೋಟರಿ ಕ್ಲಬ್ಬಿನ ಪ್ರಮುಖರಾದ ಸುಧಾಕರ ಶೆಟ್ಟಿ, ರಾಹುಲ್ ಬಾವಾಜಿ, ಅಭಿಷೇಕ ಕನ್ಯಾಡಿ, ಹವಾಲ್ದಾರ್ ಮಹಾದೇವ ಬಳೆಗಾರ ಮೊದಲಾದವರು ಉಪಸ್ಥಿತರಿದ್ದರು.
