ದಾಂಡೇಲಿ : ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ರಸ್ತೆ ಸುರಕ್ಷತೆಯ ಕುರಿತಂತೆ ಗುರುವಾರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಶಿವಾನಂದ ಅಂಬಿಗೇರ ಅವರು ಜನರ ಜೀವನ ಉಳಿಸುವಲ್ಲಿ ಆಟೋ ಚಾಲಕರ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರ ಪಾತ್ರ ಮಹತ್ವಪೂರ್ಣವಾಗಿದೆ. ಈ ನಿಟ್ಟಿಲ್ಲಿ ಆಟೋ ಚಾಲಕರು ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಸಂಚಾರ ನಿಯಮವನ್ನು ತಪ್ಪದೆ ಪಾಲಿಸಬೇಕೆಂದು ಹೇಳಿದರು. ಪ್ರಯಾಣಿಕ ಸೇವೆ ನೀಡುವ ವಾಹನಗಳಾದ ಆಟೋ ಮತ್ತು ಮ್ಯಾಕ್ಸಿಕ್ಯಾಬ್ ಸೇರಿದಂತೆ ಇನ್ನಿತರ ವಾಹನಗಳವರು ತಮ್ಮ ವಾಹನಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿ ಪತ್ರಗಳನ್ನು ಹೊಂದಿರಬೇಕು. ಕಡ್ಡಾಯವಾಗಿ ಪ್ರತಿಯೊಂದು ವಾಹನವು ವಿಮೆಯನ್ನು ಹೊಂದಿರಬೇಕು. ಸಂಚಾರ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದಾಗ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ, ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಆಟೋ ಚಾಲಕರು ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಉಪಸ್ಥಿತರಿದ್ದರು.
