ಕಾರವಾರ:
ಕಾರವಾರದ ಗುಲಾಬಿ ಮರಾಠೆ ಎನ್ನುವವರ ಮನೆಗೆ ದಾಂಡಿಗರು ನುಗ್ಗಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಅವರು ರಂಪಾಟ ಮಾಡಿದ ಬಗ್ಗೆ ದೂರು ದಾಖಲಾಗಿದೆ.
ಕಾರವಾರದ ಉಳಗಾ ಬಳಿಯ ಸಾತಗೇರಿಯಲ್ಲಿ ಗುಲಾಬಿ ಗೋವಿಂದ ಮರಾಠೆ ಅವರು ವಾಸವಾಗಿದ್ದಾರೆ. ಉಳಗಾ ಫೈಲವಾಡದ ವತಿಭಾಗದ ಚಂದನ ವೆಂಕಟರಾಯ್ ಮರಾಠೆ ಹಾಗೂ ರಾಘವೇಂದ್ರ ವೆಂಕಟರಾಯ್ ಮರಾಠೆ ಅವರು ಕತ್ತಿ ಹಿಡಿದು ಗುಲಾಬಿ ಮರಾಠೆ ಅವರ ಮನೆಗೆ ನುಗ್ಗಿದ್ದಾರೆ. ಜನವರಿ 20ರ ರಾತ್ರಿ ಏಕಾಏಕಿ ಇಬ್ಬರು ಮನೆಗೆ ನುಗ್ಗಿದನ್ನು ನೋಡಿ ಗುಲಾಬಿ ಮರಾಠೆ ಅವರು ಆತಂಕಕ್ಕೆ ಒಳಗಾಗಿದ್ದಾರೆ.
ಮನೆಗೆ ನುಗ್ಗಿದ ಆ ಆಗಂತುಕರಿಬ್ಬರು ಗುಲಾಬಿ ಮರಾಠೆ ಅವರ ಮೊಮ್ಮಗ ಓಂಕಾರ್ ಅವರ ಕುತ್ತಿಗೆ ಹಿಡಿದಿದ್ದಾರೆ. `ನಿನ್ನ ಮಗ ವಿಜಯ ಮರಾಠೆಯನ್ನು ನಮ್ಮೊಂದಿಗೆ ಕಳುಹಿಸು. ಇಲ್ಲವಾದರೆ, ಮೊಮ್ಮಗನನ್ನು ಮುಗಿಸಿ ಬಿಡುವೆ’ ಎಂದು ಬೆದರಿಸಿದ್ದಾರೆ. ಆಗ, ಓಂಕಾರ್ ಅವರ ತಾಯಿ ಮಗನ ರಕ್ಷಣೆಗೆ ಹೋಗಿದ್ದು, ಆ ಮಹಿಳೆಗೂ ರಾಘವೇಂದ್ರ ಮರಾಠೆ ಅವರು ಕಾಲಿನಿಂದ ಒದ್ದಿದ್ದಾರೆ. `ರಾತ್ರಿ 12 ಗಂಟೆಗೆ ಮನೆಗೆ ಬರಲು ಹೇಳು’ ಎಂದು ದಬಾಯಿಸಿ ಹೋದ ಅವರಿಬ್ಬರು ಮತ್ತೆ ರಾತ್ರಿ 1ಗಂಟೆಗೆ ಬಂದು ಬೆದರಿಕೆ ಒಡ್ಡಿದ್ದಾರೆ.
ಈ ಎಲ್ಲಾ ವಿಷಯಗಳ ಬಗ್ಗೆ ಗುಲಾಬಿ ಮರಾಠೆ ಅವರು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಜೊತೆಗೆ ಆರೋಪಿತರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
