ಕಾರವಾರ:
ನಗರದ ಡೆಸರ್ಟಿನೊ ಕೆಫೆಯಲ್ಲಿ ಮಂಗಳವಾರ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಬೆಂಕಿಯಿಂದ ಭಾರೀ ಅನಾಹುತ ಸಂಭವಿಸುವುದು ತಪ್ಪಿದರೂ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ಘಟನೆಯ ಸಮಯದಲ್ಲಿ ಕೆಫೆಯಲ್ಲಿ ಗ್ರಾಹಕರು ಹಾಗೂ ಕಾರ್ಮಿಕರು ಇದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಭಯಭೀತ ವಾತಾವರಣ ನಿರ್ಮಾಣವಾಯಿತು. ಕೆಲಕಾಲ ಕೆಫೆ ಆವರಣದಲ್ಲಿ ಆತಂಕದ ಸ್ಥಿತಿ ಉಂಟಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಲೇ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
