ದಾಂಡೇಲಿ : ಸ್ಥಗಿತಗೊಂಡಿದ್ದ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.
ಈ ಬಗ್ಗೆ ಬುಧವಾರ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿಯವರು ಮಾತನಾಡುತ್ತಾ, ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನರಾರಂಭವಾಗುತ್ತಿರುವುದು ಅತ್ಯಂತ ಸಂತಸದ ವಿಚಾರ. ರೈಲು ಸಂಚಾರ ಪುನರಾರಂಭಕ್ಕೆ ಕಾರಣರಾದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹಾಗೂ ಇದಕ್ಕೆ ಪ್ರಯತ್ನಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ಮೋಹನ ಹಲವಾಯಿಯವರು ರೈಲು ಸಂಚಾರ ಪುನರಾರಂಭಕ್ಕೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ರೈಲ್ವೆ ಸಚಿವರಿಗೆ, ರೈಲ್ವೆ ಖಾತೆ ರಾಜ್ಯ ಸಚಿವರಿಗೆ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿ ಆಗ್ರಹಿಸಿರುತ್ತಾರೆ. ಈ ನಿಟ್ಟಿನಲ್ಲಿ ರೈಲ್ವೆ ಸಂಚಾರದ ಪುನರಾರಂಭದಲ್ಲಿ ಆರ್.ವಿ.ದೇಶಪಾಂಡೆಯವರ ಪಾತ್ರವೂ ಸ್ಮರಣೀಯವಾಗಿದೆ ಎಂದು ಹೇಳಿದರು. ಇನ್ನೂ ರೈಲ್ವೆ ಸಂಚಾರ ಪುನರಾರಂಭದ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಹ ಹೋರಾಟಗಳನ್ನು ಮಾಡಿದ್ದು, ಆ ಎಲ್ಲಾ ಪ್ರಯತ್ನ ಹಾಗೂ ಪಕ್ಷಾತೀತ ಪ್ರಯತ್ನದಿಂದಾಗಿ ರೈಲ್ವೆ ಸಂಚಾರ ಪುನರಾರಂಭವಾಗುವಂತಾಗಿದೆ ಎಂದು ಮೋಹನ ಹಲವಾಯಿ ತಿಳಿಸಿದರು. ಫೆಬ್ರವರಿ 7ರಂದು ನಡೆಯಲಿರುವ ರೈಲ್ವೆ ಸಂಚಾರ ಪುನರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿ, ಶಾಸಕ ದೇಶಪಾಂಡೆಯವರು ರೈಲ್ವೆ ಸಚಿವರಿಗೆ ಮತ್ತು ರೈಲ್ವೆ ಇಲಾಖೆಗೆ ಬರೆದ ಪತ್ರಗಳ ಬಗ್ಗೆ ದಿನಾಂಕ ಸಹಿತ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಇಕ್ಬಾಲ್ ಶೇಖ, ಕೀರ್ತಿ ಗಾಂವಕರ, ಕೆಪಿಸಿಸಿ ಸದಸ್ಯ ಕರೀಂ ಅಜ್ರೇಕರ, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷ ಅಷ್ಪಾಕ್ ಶೇಖ, ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆ ರೇಣುಕಾ ಬಂದಂ, ಪಕ್ಷದ ಮುಖಂಡರಾದ ತಸ್ವರ ಸೌದಾಗರ, ಯಾಸ್ಮಿನ್ ಕಿತ್ತೂರು, ಸಂಜಯ ನಂದ್ಯಾಳ್ಕರ, ಆಸೀಪ್ ಮುಜಾವರ, ಅನಿಲ್ ನಾಯ್ಕರ, ದಾದಾಪೀರ್ ನದೀಮುಲ್ಲಾ, ದಿವಾಕರ ನಾಯ್ಕ ಇಮ್ತಿಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
