ದಾಂಡೇಲಿ : ಗಣೇಶಗುಡಿಯಲ್ಲಿ ನಡೆಯುತ್ತಿರುವ ರಾಪ್ಟಿಂಗ್ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವಘಡಕ್ಕೆ ದಾರಿ ಮಾಡಿಕೊಡಲಿದೆ. ಇದರಿಂದ ಬೆಳೆಯುತ್ತಿರುವ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ. ಸೂಕ್ತ ನಿಯಮಾವಳಿಗಳನ್ನು ಪಾಲನೆ ಮಾಡದೇ ರಾಪ್ಟಿಂಗ್ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಶಾಸಕರಾದ ಸುನೀಲ ಹೆಗಡೆಯವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅವರು ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದರು. ರಾಪ್ಟಿಂಗ್ ನಡೆಸಲು ಅನುಮತಿ ಕೊಡುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡು ಸಮಿತಿ ರಚಿಸಿ, ಆನಂತರವೇ ಸಮಿತಿಯ ಮೂಲಕ ಸೂಕ್ತ ಪರಿಶೀಲನೆ ನಡೆಸಿ ರಾಪ್ಟಿಂಗ್ ನಡೆಸಲು ಅನುಮತಿಯನ್ನು ನೀಡಬೇಕು. ಆದರೆ ಗಣೇಶಗುಡಿಯಲ್ಲಿ ಮನಸ್ಸೊ ಇಚ್ಛೆ ಹಣ ಮಾಡುವ ಒಂದೇ ಒಂದು ಉದ್ದೇಶದಿಂದ ರಾಪ್ಟಿಂಗ್ ನಡೆಸಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅವಘಡಗಳು, ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ. ಇದಕ್ಕೆ ರಾಪ್ಟಿಂಗಿಗೆ ಅನುಮತಿಯನ್ನು ನೀಡಿರುವ ಜಿಲ್ಲಾಧಿಕಾರಿಯವರೇ ಹೊಣೆಗಾರರಾಗಿರುತ್ತಾರೆ ಎಂದ ಅವರು, ಅವೈಜ್ಞಾನಿಕವಾಗಿ ರಾಫ್ಟಿಂಗ್ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಸುನಿಲ್ ಹೆಗಡೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬುದವಂತ ಗೌಡ ಪಾಟೀಲ್, ಉಪಾಧ್ಯಕ್ಷ ಗುರು ಮಠಪತಿ, ಪಕ್ಷದ ಮಾಜಿ ಅಧ್ಯಕ್ಷರಾದ ರೋಷನ್ ನೇತ್ರಾವಳಿ, ಚಂದ್ರಕಾಂತ ಕ್ಷೀರಸಾಗರ ಮೊದಲಾದವರು ಉಪಸ್ಥಿತರಿದ್ದರು.
