ಕಾರವಾರ:
ಇದೇ ಫೆ. 22ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರವಾರಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಮಂಜುಗುಣಿ ಗಂಗಾವಳಿ ಸೇತುವೆ ಮತ್ತು ಕ್ರಿಮ್ಸ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟಿಸಲಿದ್ದಾರೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ಅಂಕೋಲಾ ತಾಲೂಕಿನ ಅಘನಾಶಿನಿ ನದಿಗೆ ಅಡ್ಡವಾಗಿ ಮಂಜುಗುಣಿ ಮತ್ತು ಗಂಗಾವಳಿ ಸೇತುವೆ ನಿರ್ಮಾಣದ ಕನಸು ಸುಮಾರು ಐವತ್ತು ವರ್ಷಗಳ ಹಿಂದಿನದ್ದು. 2014 – 2018 ರಲ್ಲಿ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರಕ್ಕೆ ಹಲವಾರು ಸೇತುವೆಗಳನ್ನು ಮಂಜೂರಿ ಮಾಡಿಸಲಾಗಿತ್ತು. ಅದರಲ್ಲಿ ಮಂಜುಗುಣಿ ಗಂಗಾವಳಿ ಸೇತುವೆ ಪ್ರಮುಖವಾದದ್ದು. ಆದರೆ ತನ್ನ ಶಾಸಕತ್ವದ ಅವಧಿ ಮುಗಿದ ಸುಮಾರು ಐದು ವರ್ಷ ಈ ಸೇತುವೆ ಕಾಮಗಾರಿ ಕೆಲಸ ಕೀಳು ಮಟ್ಟದ ರಾಜಕೀಯದಿಂದಾಗಿ ನೆನೆಗುದಿಗೆ ಬಿದ್ದಿತ್ತು ಎಂದು ಆರೋಪಿಸಿರುವ ಸೈಲ್, ತಾನು ಮತ್ತೊಮ್ಮೆ ಶಾಸಕನಾಗಿ ಆರಿಸಿ ಬಂದ ನಂತರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿ ಹೆಚ್ಚಿನ ಅನುದಾನ ತಂದು ಈ ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಯ 465 ಬೆಡ್ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಜಿಲ್ಲೆಯ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಮೃತ ಹಸ್ತದಿಂದ ಉದ್ಘಾಟನೆಯಾಗಲಿದೆ.
ಈ ಸಂದರ್ಭದಲ್ಲಿ ಕೆರವಡಿ ಸೇತುವೆ ಸೇರಿದಂತೆ ಕ್ಷೇತ್ರದ ಹತ್ತು ಹಲವಾರು ಅಭಿವೃದ್ಧಿಶೀಲ ಬೇಡಿಕೆಗಳಿಗೆ ಅಂತಿಮ ರೂಪ ದೊರಕಬಹುದು.ಇದರ ಜೊತೆಗೆ ಕೆರವಡಿ ಸೇತುವೆ ಕಾಮಗಾರಿ ಮಳೆಗಾಲ ಕ್ಕಿಂತ ಮೊದಲು ಸಂಪೂರ್ಣ ಗೊಳಿಸುವ ವಿಶ್ವಾಸವಿದೆ ಎಂದು ಶಾಸಕ ಸೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
