ದಾಂಡೇಲಿ:
ರೈಲ್ವೆ ಹುದ್ದೆಗಳ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿದ್ದರೂ ಸಹ ಹುಬ್ಬಳ್ಳಿ ವಲಯದಲ್ಲಿ ಕರೆಯಲಾಗಿರುವ ಸ್ಟೇಷನ್ ಮಾಸ್ಟರ್ ಮುಂಬಡ್ತಿ ಹುದ್ದೆಯ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ವಂಚಿಸಲಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅವರು ಶನಿವಾರ ದಾಂಡೇಲಿಗಾಗಮಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣರವರಿಗೆ ಲಿಖಿತ ಮನವಿ ನೀಡಿದ್ದು, ಈ ಮನವಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆವರಿಗೂ ಸಲ್ಲಿಸಿದ್ದಾರೆ.
2012ರಿಂದಲೇ ರೈಲ್ವೆ ಇಲಾಖೆಯ ಗ್ರೂಪ್ ‘ಸಿ’ ಹಾಗೂ ಗ್ರೂಪ್ ‘ಡಿ’ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಆದೇಶಿಸಲಾಗಿದೆ. ತಾವು ಕೇಂದ್ರ ರೈಲ್ವೆ ರಾಜ್ಯ ಮಂತ್ರಿಗಳಾದ ನಂತರದಲ್ಲಿಯೂ ಕೂಡ ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು, ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿಗಳು ಸಹ ಕನ್ನಡದಲ್ಲಿ ರೈಲ್ವೆ ಪರೀಕ್ಷೆ ಬರೆಯಲು ಸಮ್ಮತಿಸಿದ್ದಾರೆ ಎಂಬುದನ್ನ ತಿಳಿಸಿದ್ದೀರಿ. ಆದರೆ ಅದು ಈವರೆಗೂ ಜಾರಿಯಾಗದೇ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ನೀಡುತ್ತಿರುವುದು ಸರಿಯಾದ ಕ್ರಮವಾಗಿರುವುದಿಲ್ಲ.
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಲಯದಲ್ಲಿ ಸ್ಟೇಷನ್ ಮಾಸ್ಟರ್ 45 ಹುದ್ದೆಗಳಿಗೆ ಮುಂಬಡ್ತಿ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ. ಕಳೆದ ಜನವರಿ 31 ರಂದೇ ಈ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಮಾರ್ಚ್ 2ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆದರೆ ಸ್ಟೇಷನ್ ಮಾಸ್ಟರ್ ಮುಂಬಡ್ತಿ ನೇಮಕಾತಿಯ ಈ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿ ಅವಕಾಶ ನೀಡದೆ ಕೇವಲ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅಧಿಸೂಚನೆ ಹೊರಡಿಸಲಾಗಿದೆ.
ಈಗಾಗಲೇ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಗ್ರುಪ್ ‘ಸಿ’ ಮತ್ತು ಗ್ರುಪ್ ‘ಡಿ’ ಹುದ್ದೆಗೆ ಆಯ್ಕೆಯಾಗಿರುವ ರೈಲ್ವೆ ನೌಕರರಿಗೆ ಆಂತರಿಕ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕಿತ್ತು. ಆದರೆ ಹಾಗೆ ಮಾಡದೆ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಕಡ್ಡಾಯಗೊಳಿಸಿ ಅನ್ಯಾಯ ಮಾಡಲಾಗಿದೆ.
ರೈಲ್ವೆ ಪರೀಕ್ಷೆಗಳನ್ನು ರೈಲ್ವೆ ಬೋರ್ಡ್ ಮಾರ್ಗಸೂಚಿಯಂತೆ ಸಿಬಿಟಿ (ಕಂಪ್ಯೂಟರ್ ಬೇಸ್) ಮೂಲಕ ನಡೆಸಲಾಗುತ್ತದೆ. ಹೀಗಾಗಿ ಅಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಮಾತ್ರ ಬಳಸಲಾಗುತ್ತದೆ. ತಾಂತ್ರಿಕ ಕಾರಣದಿಂದಾಗಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಇಲ್ಲಿರುವ ತಾಂತ್ರಿಕ ತೊಡಕನ್ನ ಪರಿಹರಿಸಿ ಕನ್ನಡಕ್ಕೂ ಅವಕಾಶ ಮಾಡಿಕೊಡಬೇಕಾದ ಅಗತ್ಯವಿದೆ.
ರೈಲ್ವೆ ಇಲಾಖೆಯ ಯಾವುದೇ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಕಡ್ಡಾಯವಾಗಿ ಅವಕಾಶ ನೀಡುವಂತಾಗಬೇಕು . ಕನ್ನಡಿಗರಾದ ನಮಗೆ ಇಂಗ್ಲೀಷ ಹಾಗೂ ಹಿಂದಿಯ ಬಗ್ಗೆ ದ್ವೇಷವಿಲ್ಲ. ಬೇರೆ ಭಾಷೆಯನ್ನು ಕಲಿಯಲೇಬಾರದೆಂಬ ನಿಲುವೂ ನಮ್ಮದಲ್ಲ. ಆದರೆ ಗ್ರುಪ್ ‘ಸಿ’ ಮತ್ತು ಗ್ರುಪ್ ‘ಡಿ’ ಉದ್ಯೋಗಕ್ಕೆ ಬರುವವರು ಹೆಚ್ಚಾಗಿ ಬಡವರು ಹಾಗೂ ಕನ್ನಡ ಶಾಲೆಯಲ್ಲಿ ಕಲಿತವರೇ ಆಗಿರುತ್ತಾರೆ. ಅವರಿಗೆ ಇಂಗ್ಲೀಷ ಹಾಗೂ ಹಿಂದಿಯೆಂದರೆ ಕಷ್ಟವಾಗುತ್ತದೆ. ಆ ಭಾಷೆಗಳನ್ನು ಕಲಿತು ಪರೀಕ್ಷೆ ಬರೆಯುವುದು ಕಷ್ಟಸಾಧ್ಯವಾದುದು. ಜೊತೆಗೆ ಸರ್ಕಾರವೇ ನೀಡಿರುವ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಮತ್ತೆ ಅಲ್ಲಿಂದ ತೆಗೆದುಹಾಕಿ ಅನ್ಯಾಯ ಮಾಡುವುದನ್ನು ಮಾತ್ರ ಒಪ್ಪುವುದಿಲ್ಲ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಲಯದಲ್ಲಿ ನಡೆಯುವ ಮುಂಬಡ್ತಿ ನೇಮಕಾತಿಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ನಾವು, ಒಂದಾನುವೇಳೆ ಅದನ್ನು ಸಾಧ್ಯವಾಗಿಸದಿದ್ದರೆ, ಅನಿವಾರ್ಯವಾಗಿ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಬಿ.ಎನ್. ವಾಸರೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
