ಕಾರವಾರ:
ಕಾಳಿ ನದಿಯಿಂದ ಹಳಿಯಾಳ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯು ನೆನೆಗುದಿಗೆ ಬಿದ್ದಿದ್ದು, ಕೂಡಲೇ ಸರಕಾರವು ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ ಬೊಬಾಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2018 ರಲ್ಲಿ ಕಾಳಿನದಿಯಿಂದ ಹಳಿಯಾಳದ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಆರಂಭವಾಗಿತ್ತು. 2025ರ ವರೆಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿಯೂ ಈ ವರೆಗೆ ಮುಗಿದಿಲ್ಲ. ಇದರಿಂದ ಹಳಿಯಾಳ ಭಾಗದ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಹಳಿಯಾಳದಲ್ಲಿ ಕಬ್ಬು ಮುಖ್ಯ ಬೆಳೆಯಾಗಿದ್ದು ರೈತರಿಗೆ ನೀರು ಸಾಲುತ್ತಿಲ್ಲ. ಜಮೀನಿನಲ್ಲಿ ಐದಾರು ಬರ್ವೆಲ್ ಕೊರೆದೂ ನೀರು ಸಿಗುತ್ತಿಲ್ಲ. ಇರುವ ಬರ್ವೆಲ್ಗಳಲ್ಲಿ ಜನವರಿ ತಿಂಗಳಲ್ಲಿಯೇ ನೀರು ಬತ್ತಿ ಹೋಗುತ್ತಿದೆ. ಈ ಹಿನ್ನಲೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಶೀಘ್ರದಲ್ಲಿ ಹಳಿಯಾಳದ ರೈತರೊಂದಿಗೆ ಚರ್ಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
