ಮುಂಡಗೋಡ:
ತಾಲೂಕಿನ ಪಟ್ಟಣದ ಅಮ್ಮಾಜಿ ಕೆರೆಯ ಸಮೀಪದ ಗದ್ದೆಯಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಹುಲ್ಲಿನ ಬಣವಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಭಸ್ಮವಾದ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.
ಪಟ್ಟಣದ ನಿವಾಸಿ ನವೀನ್ ಹುದ್ಲಮನಿ ಅವರಿಗೆ ಸೇರಿದ ಸುಮಾರು ಐದು ಟ್ರ್ಯಾಕ್ಟರ್ ಭತ್ತದ ಹುಲ್ಲಿನ ಬಣವಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬೆಂಕಿಯ ತೀವ್ರತೆಗೆ ಗದ್ದೆಯಲ್ಲಿದ್ದ ಮೂರು ಹಲಸಿನ ಮರಗಳು, ಮೂರು ತೆಂಗಿನ ಮರಗಳು, ನಾಲ್ಕು ಅಡಿಕೆ ಮರಗಳು ಹಾಗೂ ಸಾಗುವಾನಿ ಮರದಿಂದ ತಯಾರಿಸಿದ ಎತ್ತಿನ ಬಂಡಿಯೂ ಬೆಂಕಿಗಾಹುತಿಯಾಗಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಅದು ವ್ಯಾಪಕವಾಗಿ ಹರಡಿದ್ದು, ಸ್ಥಳೀಯರು ಆತಂಕಗೊಂಡರು.
ಇದೇ ವೇಳೆ ಮತ್ತೊಬ್ಬ ಪಟ್ಟಣದ ನಿವಾಸಿ ಗಂಗಯ್ಯಾ ಹಿರೇಮಠ ಅವರಿಗೆ ಸೇರಿದ ಸುಮಾರು ಎರಡು ಟ್ರ್ಯಾಕ್ಟರ್ ಭತ್ತದ ಹುಲ್ಲಿನ ರೋಲರ್ ಪೆಂಡಿಗಳಿಗೂ ಬೆಂಕಿ ತಗುಲಿ ಭಾರಿ ನಷ್ಟ ಉಂಟಾಗಿದೆ. ಜಾನುವಾರುಗಳಿಗೆ ಮೇವಿಗಾಗಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣವಿಗಳು ಸುಟ್ಟು ಹೋಗಿರುವುದು ರೈತರಿಗೆ ದೊಡ್ಡ ಹೊಡೆತವಾಗಿದೆ.
ಮಧ್ಯಾಹ್ನ ವೇಳೆಯಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಗಾಳಿ ಸಹಕಾರದಿಂದ ವೇಗವಾಗಿ ಹರಡಿದ ಪರಿಣಾಮ ಪರಿಸ್ಥಿತಿ ನಿಯಂತ್ರಣಕ್ಕೆ ಸವಾಲಾಯಿತು. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಶ್ರಮಪಟ್ಟು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಬೆಂಕಿ ಇನ್ನಷ್ಟು ವ್ಯಾಪಿಸದಂತೆ ತಡೆದು ಸುತ್ತಮುತ್ತಲಿನ ಗದ್ದೆಗಳನ್ನು ರಕ್ಷಿಸುವಲ್ಲಿ ಅವರು ಯಶಸ್ವಿಯಾದರು.
ಆದರೆ ಆಗಲೇ ಹುಲ್ಲಿನ ಬಣವಿ ಹಾಗೂ ಮರಗಳು ಸುಟ್ಟು ಭಸ್ಮವಾಗಿದ್ದವು. ಈ ಅವಘಡದಲ್ಲಿ ಒಟ್ಟು ಸುಮಾರು ₹30 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಸಂಬಂಧಿತ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಘಟನೆ ಹಿನ್ನೆಲೆಯಲ್ಲಿ ರೈತರು ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಗತ್ಯತೆ ಮತ್ತೊಮ್ಮೆ ಸ್ಪಷ್ಟವಾಗಿದೆ.
