ಶಿರಸಿ:
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಅಚಾನಕ್ ನಾಪತ್ತೆಯಾಗಿರುವ ಘಟನೆ ಪಟ್ಟಣದಲ್ಲಿ ಆತಂಕ ಮೂಡಿಸಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ.
ಹಾವೇರಿ ಜಿಲ್ಲೆಯ ಹಾನಗಲ ತಾಲೂಕಿನ ಶೇಷಗಿರಿಯ ಅಮೂಲ್ಯಾ ಶಂಕ್ರಪ್ಪ ಕಾಳಿ (18) ನಾಪತ್ತೆಯಾದ ವಿದ್ಯಾರ್ಥಿನಿ. ಈಕೆ ಶಿರಸಿಯ ಪಡ್ತಿಗಲ್ಲಿರುವ ಪಿಜಿಯಲ್ಲಿ ವಾಸವಿದ್ದು, ತಾಲೂಕಿನ ಬಿಳೂರು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕುಟುಂಬದವರು ಹಾಗೂ ಸ್ನೇಹಿತರ ಹೇಳಿಕೆಯ ಪ್ರಕಾರ, ಅಮೂಲ್ಯಾ ಶಾಂತ ಸ್ವಭಾವದ ವಿದ್ಯಾರ್ಥಿನಿಯಾಗಿದ್ದು, ನಿಯಮಿತವಾಗಿ ಕಾಲೇಜಿಗೆ ತೆರಳುತ್ತಿದ್ದಳು ಎನ್ನಲಾಗಿದೆ.
ಘಟನೆಯ ವಿವರ ಪ್ರಕಾರ, ಫೆಬ್ರವರಿ 8ರಂದು ಬೆಳಿಗ್ಗೆ ಸುಮಾರು 8 ಗಂಟೆ ಸುಮಾರಿಗೆ ಅಮೂಲ್ಯಾ ತನ್ನ ಬ್ಯಾಗ್ ತೆಗೆದುಕೊಂಡು ಪಿಜಿಯಿಂದ ಹೊರಟಿರುವುದು ತಿಳಿದುಬಂದಿದೆ. ಆದರೆ 8.30ರ ಹೊತ್ತಿಗೆ ಪಿಜಿ ವಾರ್ಡನ್ ಕುಟುಂಬಕ್ಕೆ ಕರೆ ಮಾಡಿ “ಅಮೂಲ್ಯಾ ಪಿಜಿಯಲ್ಲಿ ಕಾಣುತ್ತಿಲ್ಲ” ಎಂದು ಮಾಹಿತಿ ನೀಡಿದ್ದಾರೆ. ಕಾಲೇಜಿಗೂ ಹಾಜರಾಗದಿರುವುದು ಖಚಿತವಾದ ಬಳಿಕ ಆತಂಕ ಮತ್ತಷ್ಟು ಹೆಚ್ಚಾಗಿದೆ.
ವಿದ್ಯಾರ್ಥಿನಿಯ ಕುಟುಂಬದವರು ತಕ್ಷಣವೇ ಶಿರಸಿ ನಗರ ಬಸ್ ನಿಲ್ದಾಣ, ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯವೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಾಯಿ ಜಯಶ್ರೀ ಶಂಕ್ರಪ್ಪ ಕಾಳಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್ ಕರೆ ವಿವರಗಳು, ಸ್ನೇಹಿತರ ಸಂಪರ್ಕಗಳು ಸೇರಿದಂತೆ ವಿವಿಧ ಕೋನಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಅಪಹರಣದ ಅನುಮಾನವೋ, ಸ್ವಯಂಪ್ರೇರಿತವಾಗಿ ಹೊರಟಿರುವಳೋ ಎಂಬ ದಿಕ್ಕಿನಲ್ಲಿ ತನಿಖೆ ಸಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕಾಣೆಯಾದ ಅಮೂಲ್ಯಾ ಸುಮಾರು 5 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾಗುವ ಸಂದರ್ಭದಲ್ಲಿ ಯಾವ ಉಡುಪು ಧರಿಸಿದ್ದಳು ಎಂಬ ಮಾಹಿತಿ ಇನ್ನಷ್ಟೇ ಸಂಗ್ರಹಿಸಲಾಗುತ್ತಿದೆ.
ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದು, ವಿದ್ಯಾರ್ಥಿನಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಶಿರಸಿ ನಗರ ಪೊಲೀಸ್ ಠಾಣೆ (08384-226333, 9480805264) ಅಥವಾ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ (08384-226260) ಗೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಪರೀಕ್ಷೆಗಳ ಹೊಸ್ತಿಲಲ್ಲೇ ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣ ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು, ಅಮೂಲ್ಯಾ ಸುರಕ್ಷಿತವಾಗಿ ಮನೆಗೆ ಮರಳಲಿ ಎಂಬ ಆಶಯ ಕುಟುಂಬದವರದ್ದಾಗಿದೆ. ಪೊಲೀಸರು ಶೀಘ್ರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
